ದತ್ತ ಜಯಂತಿ ಉತ್ಸವ; ಇಂದು ಅನುಸೂಯ ದೇವಿ ಜಯಂತಿ

KannadaprabhaNewsNetwork |  
Published : Dec 02, 2025, 01:08 AM IST
ದತ್ತ ಜಯಂತಿಯ ಹಿನ್ನಲೆಯಲ್ಲಿ ಕೇಸರಿ ಮಯವಾದ ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತ. | Kannada Prabha

ಸಾರಾಂಶ

ಚಿಕ್ಕಮಗಳೂರುವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ಮಂಗಳವಾರ ಅಧಿಕೃತ ಚಾಲನೆ ಸಿಗಲಿದೆ.

- ಸಂಕೀರ್ತನಾ ಯಾತ್ರೆ, ಮೂರು ದಿನಗಳ ಉತ್ಸವಕ್ಕೆ ಇಂದು ಚಾಲನೆ, ನಾಳೆ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ, ಖಾಕಿ ಪಡೆಯ ಸರ್ಪಗಾವಲು,

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ಮಂಗಳವಾರ ಅಧಿಕೃತ ಚಾಲನೆ ಸಿಗಲಿದೆ.

ದತ್ತ ಜಯಂತಿ ಉತ್ಸವದ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಪ್ರಮುಖ ರಸ್ತೆಗಳು ಕೇಸರಿ ಧ್ವಜ, ಬಂಟಿಂಗ್ಸ್‌ಗಳಿಂದ ಅಲಂಕಾರಗೊಂಡಿವೆ. ಎಲ್ಲೆಡೆ ಹಬ್ಬದ ವಾತಾವರಣ ಮೂಡಿದೆ.

ದತ್ತ ಜಯಂತಿಯ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ದತ್ತಭಕ್ತರು ನ. 26 ರಂದು ದತ್ತಮಾಲೆ ಧರಿಸಿದ್ದು, ಈವರೆಗೆ ಐದು ದಿನಗಳ ಕಾಲ ವ್ರತವನ್ನು ಆಚರಿಸಿದ್ದಾರೆ. ಈ ಮೂರುಗಳ ಅವಧಿಯಲ್ಲಿ ಇನ್ನಷ್ಟು ಮಂದಿ ದತ್ತಮಾಲೆಯನ್ನು ಧರಿಸಲಿದ್ದಾರೆ. ಮೂರು ದಿನಗಳ ಉತ್ಸವಕ್ಕೆ ಮಂಗಳವಾರ ಚಾಲನೆ ಸಿಗಲಿದ್ದು, ಮೊದಲ ದಿನವಾದ ಮಂಗಳವಾರದಂದು ಅನುಸೂಯ ದೇವಿ ಜಯಂತಿ ನಡೆಯಲಿದೆ.

ಮಹಿಳೆಯರು ಇಲ್ಲಿನ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಬೆಳಿಗ್ಗೆ 9.30ರ ವೇಳೆಗೆ ಭಜನೆ ಮಾಡುತ್ತಾ ಸಂಕೀರ್ತನಾ ಯಾತ್ರೆಯಲ್ಲಿ ಕೆ.ಎಂ. ರಸ್ತೆಯಿಂದ ಸಾಗಿ ರತ್ನಗಿರಿಯ ರಸ್ತೆಯಲ್ಲಿರುವ ಶ್ರೀ ಕಾಮಧೇನು ಗಣಪತಿ ದೇವಾಲಯ ತಲುಪಲಿದ್ದಾರೆ.

ಅಲ್ಲಿಂದ ಮಹಿಳೆಯರು ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ, ದತ್ತಪಾದುಕೆಗಳ ದರ್ಶನ ಪಡೆದು, ಅನುಸೂಯ ದೇವಿಗೆ ಪೂಜೆ ಸಲ್ಲಿಸಿ, ಧಾರ್ಮಿಕ ವಿಧಿ ವಿಧಾನಗಳು ಮುಗಿದ ಬಳಿಕ ಅಲ್ಲಿಂದ ನಿರ್ಗಮಿಸಲಿದ್ದಾರೆ. ಎರಡನೇ ದಿನವಾದ ಬುಧವಾರದಂದು ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನ ಶೋಭಾಯಾತ್ರೆ ನಡೆಯಲಿದೆ.ಬಂದೋಬಸ್ತ್‌:

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇದರ ಜತೆಗೆ ಇತ್ತೀಚಿನ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರ್ಯಾಪಿಡ್‌ ಆಕ್ಷನ್‌ ಪೋರ್ಸ್‌, ಸ್ಪೆಷಲ್‌ ಆಕ್ಷನ್‌ ಪೋರ್ಸ್‌, ಕ್ವಿಕ್‌ ರಿಯಕ್ಷನ್‌ ಟೀಮ್‌, ಕೆಎಸ್ಆರ್‌ಪಿ, ಡಿಎಆರ್‌, ಗೃಹ ರಕ್ಷಕದಳ ಹಾಗೂ ಸ್ಥಳೀಯ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಈ ವರ್ಷ ಚಳಿಯ ಪ್ರಮಾಣ ಹೆಚ್ಚಳವಾಗಿದ್ದರಿಂದ 45 ವರ್ಷದೊಳಗಿನ ಪೊಲೀಸ್‌ ಸಿಬ್ಬಂದಿಯನ್ನು ಬೇರೆ ಜಿಲ್ಲೆ ಗಳಿಂದ ಕರೆಸಿಕೊಳ್ಳಲಾಗಿದೆ. ಜಿಲ್ಲೆಯ ಗಡಿ ಭಾಗ ಸೇರಿದಂತೆ ದತ್ತಪೀಠಕ್ಕೆ ತೆರಳುವ ಮಾರ್ಗಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. 60ಕ್ಕೂ ಹೆಚ್ಚು ವಿಶೇಷ ದಂಡಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರುಗಳು ನ. 30 ರಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

500ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಬಂದೋಬಸ್ತ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಶೋಭಾಯಾತ್ರೆ ಮೇಲೆ ನಿಗಾ ಇಡಲು ದ್ರೋಣ್ ಕ್ಯಾಮರಾಗಳು ಬಳಸಲಾಗುತ್ತಿದೆ. ಜಿಲ್ಲೆಯ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಪಶ್ಚಿಮ ವಲಯದ ಐಜಿ (ಪ್ರಭಾರಿ) ಡಾ. ಚಂದ್ರಗುಪ್ತ, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಇತರೆ ಪೊಲೀಸ್‌ ಅಧಿಕಾರಿಗಳು ಇಲ್ಲಿನ ಡಿಎಆರ್‌ ಮೈದಾನದಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಸಂಜೆ ಚಿಕ್ಕ ಮಗಳೂರು ನಗರದಲ್ಲಿ ಪೊಲೀಸ್‌ ಸಿಬ್ಬಂದಿ ಪಥ ಸಂಚಲನ ನಡೆಸಿದರು. 1 ಕೆಸಿಕೆಎಂ 3ದತ್ತ ಜಯಂತಿಯ ಹಿನ್ನಲೆಯಲ್ಲಿ ಕೇಸರಿ ಮಯವಾದ ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತ.

-- 1 ಕೆಸಿಕೆಎಂ 4ದತ್ತ ಜಯಂತಿಯ ಹಿನ್ನಲೆಯಲ್ಲಿ ಬಂದೋಬಸ್ತ್‌ಗಾಗಿ ನಿಯೋಜನೆಗೊಂಡಿರುವ ಪೊಲೀಸ್‌ ಸಿಬ್ಬಂದಿ ಸೋಮವಾರ ಚಿಕ್ಕಮಗಳೂರು ನಗರದಲ್ಲಿ ಪಥ ಸಂಚಲನ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ
ಜನಪ್ರತಿನಿಧಿಗಳಿಗೆ ಗೌರ್‍ನರ್‌ ಅಪಮಾನ : ಸಿದ್ದರಾಮಯ್ಯಆಕ್ರೋಶ