ಕನ್ನಡಪ್ರಭ ವಾರ್ತೆ ದಾವಣಗೆರೆ
ತೀವ್ರ ಬರದಿಂದಾಗಿ ತತ್ತರಿಸಿದ್ದ ದಾವಣಗೆರೆ ಜಿಲ್ಲೆಯ ಜನತೆ ಗುರುವಾರ ಸಂಜೆ ದಿಢೀರನೇ ಭಾರೀ ಮಿಂಚು, ಗುಡುಗು, ಸಿಡಿಲಿನ ಆರ್ಭಟ, ಜೋರು ಮಳೆಗೆ ತತ್ತರಿಸಿದ್ದು, ಸಿಡಿಲು ಬಡಿದು 26 ಮೇಕೆಗಳ ಮಾರಣ ಹೋಮವಾದರೆ, ಹತ್ತಾರು ವಿದ್ಯುತ್ ಕಂಬ, ಮರಗಳು ಧರೆಗುರುಳಿ ಬಿದ್ದಿವೆ.ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಸಂಜೆ ಸುಮಾರು ಹೊತ್ತು ಜೋರು ಗಾಳಿ, ಗುಡುಗು, ಮಿಂಚು, ಸಿಡಿಲಿನ ಆರ್ಭಟದಿಂದ ಜನ ಭಯ ಭೀತರಾಗಿದ್ದರು. ಈಚಘಟ್ಟ ಹೊರ ವಲಯದಲ್ಲಿ ಮೇಕೆ ಮೇಯಿಸಲು ಹೋಗಿದ್ದ ರೈತ ದಂಪತಿ ಸಮ್ಮುಖದಲ್ಲೇ ಸಿಡಿಲು ಬಡಿದು, 26 ಮೇಕೆಗಳು ಸಾವನ್ನಪ್ಪಿವೆ. ಇದರಿಂದಾಗಿ ಸುಮಾರು 5 ಲಕ್ಷ ರು.ಗೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಕುರಿಗಳ ಮಾಲೀಕರಾದ ಪಾಪ್ಯಾನಾಯ್ಕ ಹಾಗೂ ಪತ್ನಿ ರೇವತಿಬಾಯಿ ಕೂದಲೆಳೆ ಅಂತರದಲ್ಲಿ ಸಿಡಿಲಿನ ಹೊಡೆತದಿಂದ ಪಾರಾಗಿ, ಸಾವನ್ನು ಗೆದ್ದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರ ಪರ ರೋಡ್ ಶೋನಲ್ಲಿ ಭಾಗವಹಿಸಿದ್ದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಈಚಘಟ್ಟಕ್ಕೆ ದೌಡಾಯಿಸಿದ್ದಾರೆ. ಮೇಕೆಗಳ ಮಾಲೀಕರಿಗೆ ಧೈರ್ಯ ಹೇಳಿ, ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.ಇತ್ತ ಜಿಲ್ಲಾ ಕೇಂದ್ರ ದಾವಣಗೆರೆ ಸುತ್ತಮುತ್ತಲು ಸಹ ಭಾರೀ ಗಾಳಿ, ಸಿಡಿಲು, ಗುಡುಗು, ಮಿಂಚಿನ ಆರ್ಭಟಕ್ಕೆ ಹಲವಾರು ಕಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದರೆ, ಅನೇಕ ಕಡೆ ಮರದ ರೆಂಬೆ ಕೊಂಬೆಗಳೇ ಮುರಿದು ಬಿದ್ದಿವೆ. ಸುಮಾರು 15-20 ನಿಮಿಷ ಕಾಲ ಜೋರು ಮಳೆಯಿಂದಾಗಿ ಏಕಾಏಕಿ ವಿದ್ಯುತ್ ತಂತಿಗಳ ಮೇಲೆ ರೆಂಬೆ ಕೊಂಬೆ ಬಿದ್ದಿದ್ದರಿಂದ ಅನೇಕ ಕಡೆ ವಿದ್ಯುತ್ ನಿಲುಗಡೆಯಾಗಿತ್ತು. ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಲು ಹರಸಾಹಸಪಡುತ್ತಿದ್ದಾರೆ.
ಹಳೆ ಸಾಗರ್ ಬೆಣ್ಣೆದೋಸೆ ಹೊಟೆಲ್ ಬಳಿ ಮರ ಉರುಳಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ಹತ್ತಾರು ದ್ವಿಚಕ್ರ ವಾಹನಗಳ ಮೇಲೆ ತಂತಿ ಸಮೇತ ಬಿದ್ದು, ವಾಹನಗಳು ಸಾಕಷ್ಟು ಜಖಂಗೊಂಡಿವೆ. ನೋಡ ನೋಡುತ್ತಿದ್ದಂತೆ ಮಳೆ ಸುರಿದಿದ್ದರಿಂದ ಮಳೆಯಿಂದ ರಕ್ಷಣೆ ಪಡೆಯಲು ಫುಟ್ ಪಾತ್ ಪಕ್ಕ ವಾಹನ ನಿಲ್ಲಿಸಿ, ಅಂಗಡಿಗಳ ಮುಂದೆ ನಿಂತಿದ್ದವರು ಹಾಗೂ ಅಂಗಡಿ ಮಾಲೀಕರು, ಸಿಬ್ಬಂದಿ, ಗ್ರಾಹಕರು ತಮ್ಮ ವಾಹನಗಳು ಜಖಂ ಆಗಿದ್ದರಿಂದ ತೀವ್ರ ಬೇಸತ್ತಿದ್ದು ಕಂಡು ಬಂದಿತು.ಇಲ್ಲಿನ ಪ್ರವಾಸಿ ಮಂದಿರ ರಸ್ತೆ ಬಳಿ ಹಳೆ ಸಾಗರ್ ಬೆಣ್ಣೆ ದೋಸೆ ಹೋಟೆಲ್ ಬಳಿ ವಿದ್ಯುತ್ ಕಂಬಗಳು ತುಂಡಾಗಿ, ನೆಲ ತೇವಗೊಂಡು ಉರುಳಿ ಬಿದ್ದಿದ್ದು, ಕೆಲ ಕಡೆ ಮರಗಳು ಉರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ಅಪಾಯ ಸಂಭವಿಸಿಲ್ಲವಾದರೂ ಸಾಕಷ್ಟು ಹಾನಿ ಸಂಭವಿಸಿದೆ. ಮಳೆಯಾಗುವ ವಾತಾವರಣ ಮುಂದುವರಿದಿದ್ದು, ಜನರು ಮತ್ತೆ ಏನಾಗುವುದೋ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.