ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ನೀರಾವರಿ ನಿಗಮದ ಕಚೇರಿ ಎದುರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪುಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳೊದಿಗೆ ನೂರಾರು ಮಂದಿ ಕಾರ್ಯಕರ್ತರ ಜೊತೆಗೂಡಿ ಧರಣಿ ಸರ್ಕಾರ ನಾಲೆಗಳಿಗೆ ನೀರು ಹರಿಸಲು ಹಿಂದೇಟು ಹಾಕಿತ್ತಿರುವುದನ್ನು ಖಂಡಿಸಿದರು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರ್ಕಾರದೊಂದಿಗೆ ಚರ್ಚೆ ನಡೆಸಿ ಮುಂದಿನ ದಿನದಲ್ಲಿ ನೀರು ಹರಿಸಲಾಗುತ್ತದೆ ಎಂದು ಭರವಸೆ ನೀಡಿದ್ದರೂ ಪ್ರತಿಭಟನಾಕಾರರು ಭರವಸೆ ನಮಗೆ ಸಾಲದು. ನಾಲೆಗಳಿಗೆ ತಕ್ಷಣ ನೀರು ಹರಿಸುವವರೆವಿಗೂ ಹಗಲು ರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದರು.ಜಿಲ್ಲೆಯ ಯಾವುದೇ ಶಾಸಕರು ರೈತರ ಮನವುಲಿಸುವ ಕೆಲಸ ಮಾಡುತ್ತಿಲ್ಲ. ಜೊತೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ನಾಲೆಗಳಿಗೆ ನೀರು ಹರಿಸುವ ಕೆಲಸ ಮಾಡದಿರುವುದಕ್ಕೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಬೆಳೆಗಳ ಉಳಿಸಿಕೊಳ್ಳಲು ನಾಲೆಗಳಿಗೆ ನೀರು ಹರಿಸಬೇಕು ಎಂದು ಪಟ್ಟು ಹಿಡಿದು ಹಗಲುರಾತ್ರಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರಿನ ಸರಬರಾಜು 6ನೇ ಹಂತದ ಕಾಮಗಾರಿಗೆ ಸರ್ಕಾರ ಮುಂದಾಗಿರುವುದನ್ನು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ ಖಂಡಿಸಿದ್ದಾರೆ. ಕೆಆರ್ ಎಸ್ ಜಲಾಶಯದ ಬಳಿ 6ನೇ ಹಂತದ ನೀರು ಸರಬರಾಜಿನ ಘಟಕ ತೆರೆಯಲು ಕಾಮಗಾರಿಗೆ ಈಗಾಗಲೇ ಜಲಾಶಯದ ಬಳಿ ಮಣ್ಣು ಪರೀಕ್ಷೆ ನಡೆಸಲಾಗುತ್ತಿರುವುದನ್ನು ತಡೆ ಮಾಡಿ ಅದರ ಕಾಮಗಾರಿಯ ಪರಿಕರಗಳನ್ನು ನೀರಾವರಿ ಇಲಾಖೆ ಅಧಿಕಾರಿಗಳ ವಶಕ್ಕೆ ರೈತ ಸಂಘದ ಕಾರ್ಯಕರ್ತರು ಒಪ್ಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪುಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ವೈ.ಕೆ.ಮಂಜು, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಶಂಭುಗೌಡ, ಮರಳಗಾಲ ಕೃಷ್ಣೇಗೌಡ, ಕೆನ್ನಾಳು ನಾಗಣ್ಣ, ಹರವು ಪ್ರಕಾಶ್, ಕಟ್ಟೇರಿ ಮಹದೇವ, ಕಡತನಾಳು ಬಾಲಕೃಷ್ಣ, ದೊಡ್ಡಪಾಳ್ಯ ಜಯರಾಮು, ದೊಡ್ಡೆಗೌಡನಕೊಪ್ಪಲು ಪ್ರಕಾಶ್, ಕ್ಯಾತನಹಳ್ಳಿ ಮಹದೇವು, ಡಿ.ಎಂ.ಕೃಷ್ಣೇಗೌಡ, ಪಾಂಡು, ಬಿ.ಎಸ್.ರಮೇಶ್, ರೇಡಿಯೋ ರಮೇಶ್, ಶಶಿಕುಮಾರ್, ಅಗ್ರಹಾರ ನಾಗರಾಜು, ಸಬ್ಬನಕುಪ್ಪೆ ನಾಗರಾಜು, ಮಧು ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.