ಮಂಗಳೂರು ನಗರದಲ್ಲಿ ಕೃತಕ ಪ್ರವಾಹ ಮತ್ತು ನೈರ್ಮಲ್ಯ ಸಮಸ್ಯೆಗಳನ್ನು ಪರಿಹರಿಸಲು ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಲು ಮಹಾನಗರಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನಿರ್ದೇಶನ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರದಲ್ಲಿ ಕೃತಕ ಪ್ರವಾಹ ಮತ್ತು ನೈರ್ಮಲ್ಯ ಸಮಸ್ಯೆಗಳನ್ನು ಪರಿಹರಿಸಲು ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಲು ಮಹಾನಗರಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನಿರ್ದೇಶನ ನೀಡಿದ್ದಾರೆ.ಅವರು ಸೋಮವಾರ ಈ ಸಂಬಂಧ ಮಹಾನಗರಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಪಂಪ್‌ವೆಲ್, ಕೊಟ್ಟಾರಚೌಕಿ, ಕೊಡಿಯಾಲ್ ಗುತ್ತು, ಕಣ್ಣೂರು, ಬೈಲಾರೆ, ಪಾಂಡೇಶ್ವರ ಮತ್ತಿತರ ಕಡೆ ಮರುಕಳಿಸುವ ಪ್ರವಾಹವನ್ನು ತಗ್ಗಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಮಳೆ ನೀರಿಗೆ ಪರ್ಯಾಯ ತಿರುವು ಮಾರ್ಗಗಳನ್ನು ಗುರುತಿಸಿ ಮತ್ತು ಕಾರ್ಯಗತಗೊಳಿಸಬೇಕು. ಪ್ರವಾಹಕ್ಕೆ ಕಾರಣವಾಗುವ ಜಲಾನಯನ ಪ್ರದೇಶಗಳ ವಿವರವಾದ ಮೌಲ್ಯಮಾಪನವನ್ನು ನಡೆಸುವಂತೆ ಅವರು ಸೂಚಿಸಿದರು. ಚರಂಡಿಯಲ್ಲಿ ನೀರಿನ ಹರಿವಿಗೆ ಅಡಚಣೆಗಳನ್ನು ತೆರವುಗೊಳಿಸಬೇಕುತಾಂತ್ರಿಕ ಕಾರ್ಯಸಾಧ್ಯತೆಯೊಂದಿಗೆ ಸ್ಥಳವಾರು ಪ್ರವಾಹ ತಗ್ಗಿಸುವ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ತಿಳಿಸಿದರು. ಮಹಾನಗರಪಾಲಿಕೆಯ ಆರೋಗ್ಯ ವಿಭಾಗವು ಘನತ್ಯಾಜ್ಯ ಸಂಗ್ರಹ ದಕ್ಷತೆಯನ್ನು ಸುಧಾರಿಸಬೇಕು. ವಿಶೇಷವಾಗಿ ತಗ್ಗು ಪ್ರದೇಶ ಮತ್ತು ನೀರು ತುಂಬಿದ ಪ್ರದೇಶಗಳಲ್ಲಿ ಮಳೆ ನೀರು ಹರಿದು ಹೋಗದಂತೆ ತಡೆಯಲು ಎಲ್ಲ ಮಳೆ ನೀರಿನ ಚರಂಡಿಗಳಲ್ಲಿ ಹೂಳು ತೆಗೆಯುವ ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕು. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ಅನಾನುಕೂಲತೆಯನ್ನು ತಡೆಗಟ್ಟಲು ತಕ್ಷಣದ ಕ್ರಮ ಮತ್ತು ಇಲಾಖೆಗಳೊಂದಿಗೆ ಸಮನ್ವಯವನ್ನು ಜಿಲ್ಲಾಧಿಕಾರಿ ಒತ್ತಿ ಹೇಳಿದರು.
ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಇತರೆ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.