ಸ್ಮಶಾನ ಭೂಮಿಗೆ ಪರಿಹಾರ ಕಂಡುಕೊಳ್ಳಲು ಡಿಸಿ ಸೂಚನೆ

KannadaprabhaNewsNetwork |  
Published : Mar 29, 2026, 03:00 AM IST
ಸ್ಮಶಾನ ಭೂಮಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ | Kannada Prabha

ಸಾರಾಂಶ

ಸ್ಮಶಾನ ಭೂಮಿ ಸಿಗುವುದೇ ಕಷ್ಟ. ಹಾಗಾಗಿ ಸ್ಮಶಾನ ಭೂಮಿ ಒತ್ತುವರಿ ಸರ್ವೆ ಮಾಡಿ, ಬೇಲಿ ಅಳವಡಿಸಿ, ಹದ್ದುಬಸ್ತ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸ್ಮಶಾನ ಭೂಮಿ ಸಿಗುವುದೇ ಕಷ್ಟ. ಹಾಗಾಗಿ ಸ್ಮಶಾನ ಭೂಮಿ ಒತ್ತುವರಿ ಸರ್ವೆ ಮಾಡಿ, ಬೇಲಿ ಅಳವಡಿಸಿ, ಹದ್ದುಬಸ್ತ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದೌರ್ಜನ್ಯ ನಿಯಂತ್ರಣ 1989 ಪ್ರತಿಬಂಧ ಕಾಯ್ದೆಯಡಿ ರಚಿತವಾದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಯಲ್ಲಿದ್ದುಕೊಂಡು ಮಾತು ಕೇಳಿಸಿಕೊಂಡು ಹೋಗುವುದಲ್ಲ. ನಿಮ್ಮ ಹಂತದಲ್ಲಿ ಪರಿಹಾರ ಕಲ್ಪಿಸಬೇಕು. ಸ್ಮಶಾನ ಭೂಮಿ ಸಿಗುವುದೇ ಕಷ್ಟ ಹಾಗಾಗಿ ಅದಕ್ಕೆ ಪರಿಹಾರ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು. ಎಲ್ಲೆಲ್ಲಿ ಸ್ಮಶಾನ ಸಮಸ್ಯೆ ಇದ್ದಲ್ಲಿ ಸಂಬಂಧಿಸಿದವರ ಗಮನಕ್ಕೆ ತರಬೇಕು. ಈ ಸಭೆಯಲ್ಲಿ ಚರ್ಚೆಯಾದ ವಿಷಯ ಹಾಗೂ ಸಮಸ್ಯೆಗಳನ್ನು ತಕ್ಷಣ ಇತ್ಯರ್ಥಪಡಿಸಬೇಕು ಎಂದರು. ವಸತಿ ನಿಲಯಗಳಲ್ಲಿ ಸ್ವಚ್ಚತೆ ಹಾಗೂ ಜಾಗೃತಿ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳಲು ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಆರೋಗ್ಯ ಇಲಾಖೆಯಲ್ಲಿ ಸಂಪರ್ಕ ಸಂವಹನ ಸಾಧಿಸಲು ಹೆಲ್ಪಲೈನ್ ಸ್ಥಾಪಿಸಿ ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಪ.ಜಾತಿ ಹಾಗೂ ಪಪಂ ಜಮೀನಿನಲ್ಲಿ ವಿದ್ಯುತ್ ಕಂಬಗಳ ಎಲ್ ಟಿ ವೈರ್ ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದರು. ದೌರ್ಜನ್ಯ ಪ್ರಕರಣಗಳ ಪಟ್ಟಿ ಮಾಡಿ ಬೇಗ ಇತ್ಯರ್ಥ ಮಾಡಿ ದೌರ್ಜನ್ಯ ಪ್ರಕರಣಗಳನ್ನು ಸಮನ್ವಯ ಸಾಧಿಸಿ ನಿರ್ವಹಿಸಿ, ತನ್ಮೂಲಕ ವಿಳಂಬ ಮಾಡದೇ ನಿಗದಿತ ಕಾಲಾವಧಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.

ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ಧನವನ್ನು ಬಾಕಿ ಉಳಿಸಿಕೊಳ್ಳದೇ ಪರಿಹಾರ ಧನ ಒದಗಿಸಬೇಕು. ಜೊತೆಗೆ ನಿಗದಿತ ಸಮಯಕ್ಕೆ ಕುಂದು ಕೊರತೆ ಸಭೆ ನಡೆಸಿ, ಗ್ರಾಮೀಣ ಭಾಗದಲ್ಲಿ ಅಸ್ಪಶ್ಯತಾ ನಿವಾರಣೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. ಸಭೆಯಲ್ಲಿ ಚರ್ಚೆಯಾಗುವ ಸಮಸ್ಯೆಗಳಿಗೆ ಪರಿಹಾರ ಕ್ರಮ ತೆಗೆದುಕೊಳ್ಳಬೇಕು. ವೈಯಕ್ತಿಕವಾಗಿ ಸಾರ್ವಜನಿಕರು ಅಧಿಕಾರಿಗಳ ಗಮನಸೆಳೆದರೆ ಅವರ ಸಮಸ್ಯೆಗಳನ್ನು ಬೇಗ ಪರಿಹರಿಸಬೇಕು. ಇನ್ನೊಂದೆಡೆ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿರುವ ವಿಷಯದ ಕಡೆಗೆ ಗಮನಹರಿಸಿ ಸಮಾಜ ಕಲ್ಯಾಣ ಇಲಾಖೆಗೆ ವರದಿ ಸಲ್ಲಿಸಬೇಕು ಎಂದರು. ನಿಮ್ಮ ಹಂತದಲ್ಲಿ ಆಗುವ ಸಮಸ್ಯೆಗಳಿಗೆ ಆದ್ಯತೆ ನೀಡಿ, ಬೇರೆ ಇಲಾಖೆಗೆ ಸಂಬಂಧಿಸಿದ್ದಾಗಿದ್ದರೆ ಆಯಾ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಫಾಲೋಅಪ್ ಮಾಡಿ, ಸ್ವಾವಲಂಬಿ ಸಾರಥಿ ಯೋಜನೆಯಡಿ ನಿಯಮಾನುಸಾರ ಫಲಾನುಭವಿಗಳಿಗೆ ಬ್ಯಾಂಕ್ ಸಹಾಯಧನ ಬಿಡುಗಡೆ ಮಾಡಿ ಸರ್ಕಾರಿ ಯೋಜನೆಗಳು ಅರ್ಹರಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಧಿಕಾರಿಗಳಿಗೆ ಸಲಹೆ ನೀಡಿದರು. ವಿವಿಧ ಯೋಜನೆಯಡಿ ಅರ್ಜಿ ಸಲ್ಲಿಸುವ ಅರ್ಹ ಫಲಾನುಭವಿಗಳ ಅರ್ಜಿ ಪರಿಶೀಲನೆ ನಡೆಸಿ ವಿಳಂಬ ಮಾಡದೇ ತಕ್ಷಣ ವಿಲೇವಾರಿ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಕೃಷಿಇಲಾಖೆ ಜಂಟಿನಿರ್ದೇಶಕ ಶಿವನಗೌಡ ಪಾಟೀಲ, ಹೆಸ್ಕಾಂ ಅಧಿಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅಭಿಷೇಕ ಚಕ್ರವರ್ತಿ, ಮದನಕುಮಾರ ನಾಗರದಿನ್ನಿ, ನಾನು ಲಮಾಣಿ, ರವಿಕಾಂತ ಬಿರಾದಾರ, ಸಿದ್ದು ರಾಯಣ್ಣರವರ, ಯಮನಪ್ಪ ಸಿದರಡ್ಡಿ, ಮಲ್ಲು ತಳವಾರ, ರಾಜಶೇಖರ ಕೂಚಬಾಳ ಹಾಗೂ ಮಲ್ಲಪ್ಪ ಹಾದಿಮನಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಮೊಬೈಲ್‌ ಬಿಟ್ಟು ಕುಸ್ತಿ, ಕಬ್ಬಡ್ಡಿ ಆಟವಾಡಿ
ಕೆಜಿಐಎಸ್ 2.0 ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯ ಅವಶ್ಯಕ: ರಾಜೇಶ ಎನ್.ಎಲ್.