ಕನ್ನಡಪ್ರಭ ವಾರ್ತೆ ಮಂಗಳೂರು
ಜಿಲ್ಲೆಯ ಕೆಲ ವಸತಿ ನಿಲಯಗಳಲ್ಲಿ ವಾಂತಿ- ಭೇದಿ ಪ್ರಕರಣ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ವಸತಿ ನಿಲಯಗಳಲ್ಲಿ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ವೈದ್ಯಕೀಯ, ನರ್ಸಿಂಗ್, ಪ್ಯಾರಾಮೆಡಿಕಲ್, ಅಲೈಡ್ ಹೆಲ್ತ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಸೂಚನೆಗಳು:
ವಸತಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಮತ್ತು ಸುರಕ್ಷಿತ ಆಹಾರ ಒದಗಿಸುವ ನಿಟ್ಟಿನಲ್ಲಿ ಸಮಿತಿ ರಚಿಸಬೇಕು. ಈ ಸಮಿತಿಯು ಪ್ರತಿ ತಿಂಗಳು ಸಭೆ ನಡೆಸಬೇಕು ಮತ್ತು ಸಭೆಯ ನಡವಳಿ ಮತ್ತು ಕೈಗೊಂಡ ಕ್ರಮಗಳ ಕುರಿತು ವರದಿಯನ್ನು ಆಯಾ ತಿಂಗಳಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಗೆ ಸಲ್ಲಿಸಬೇಕು.ಈಗಾಗಲೇ ಆರೋಗ್ಯ ಇಲಾಖೆ ರಚಿಸಿರುವ ಹಾಸ್ಟೆಲ್- 2025 ವಾಟ್ಸಪ್ ತಂಡದಲ್ಲಿ ಯಾವುದೇ ರೀತಿಯ ವಾಂತಿ- ಭೇದಿ ಪ್ರಕರಣಗಳು ಮತ್ತು ಆರೋಗ್ಯ ಸಮಸ್ಯೆ ಕಂಡುಬಂದ ಕೂಡಲೆ ಮಾಹಿತಿ ನೀಡಬೇಕು. ಆರೋಗ್ಯ ಇಲಾಖೆ ವತಿಯಿಂದ ಹೊರಡಿಸಲಾಗಿರುವ ಸುತ್ತೋಲೆಯ ಅಂಶಗಳನ್ನು ಆಯಾ ಸಂಸ್ಥೆಯಲ್ಲಿ ರಚಿಸಲಾಗಿರುವ ಸಮಿತಿಯು ಚಾಚೂ ತಪ್ಪದೆ ಪಾಲಿಸುತ್ತಿರುವ ಬಗ್ಗೆ ಸಂಸ್ಥೆಯ ಮುಖ್ಯಸ್ಥರ ಅಫಿಡವಿಕ್ ಮಾಡಿ ಮೂರು ದಿನದೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗೆ ಸಲ್ಲಿಸಬೇಕು. ಈ ಅಫಿಡವಿತ್‌ನಲ್ಲಿ ಆಯಾ ಸಂಸ್ಥೆಯ ವಸತಿ ನಿಲಯಗಳಲ್ಲಿ ಪ್ರತಿದಿನ ಮತ್ತು ಪ್ರತಿ ವಾರ ಪರಿಶೀಲನೆ, ಮೇಲ್ವಿಚಾರಣೆ ಮಾಡುತ್ತಿರುವ ಕುರಿತು ಕಡ್ಡಾಯವಾಗಿ ನಮೂದಿಸಬೇಕು.
ಆರೋಗ್ಯ ಇಲಾಖೆಯು ಎಲ್ಲ ವಸತಿ ನಿಲಯಗಳನ್ನು ಪರಿಶೀಲಿಸಲು ತಂಡ ರಚಿಸಬೇಕು. ಈ ತಂಡಗಳಲ್ಲಿ ನರ್ಸಿಂಗ್ ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕ ಪ್ರತಿನಿಧಿಗಳು ಇರುವಂತೆ ನೋಡಿಕೊಳ್ಳಬೇಕು ಮತ್ತು ಪ್ರತಿ ತಿಂಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಗೆ ಅಥವಾ ಜಿಲ್ಲಾ ಸರ್ವೇಕ್ಷಣಾ ಕಚೇರಿಗೆ ವರದಿ ಸಲ್ಲಿಸಬೇಕು.ಮುಂದಿನ ದಿನಗಳಲ್ಲಿ ವಸತಿ ನಿಲಯಗಳಲ್ಲಿ ವಾಂತಿ ಭೇದಿ ಪ್ರಕರಣ ಕಂಡುಬಂದರೆ ಅಂತಹ ಸಂಸ್ಥೆಯ ಮೇಲೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.