ಕನ್ನಡಪ್ರಭ ವಾರ್ತೆ ಹೆಬ್ರಿ ಇಲ್ಲಿನ ನಾಡ್ಪಾಲು ಗ್ರಾಪಂನ, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಮಲೆಕುಡಿಯ ಕುಟುಂಬಗಳನ್ನು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಶನಿವಾರ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು ಲ್ಲಿನ ಕಾಡಿನಲ್ಲಿ 3 - 4 ಕಿ.ಮೀ.ಗಳಷ್ಟು ಒಳಭಾಗದ ಪ್ರದೇಶಗಳಾದ ಪೀತಾಬೈಲು, ತಿಂಗಳ ಮಕ್ಕಿ, ತೆಂಗಮಾರು ಗ್ರಾಮದಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳನ್ನು ಭೇಟಿಯಾದ ಜಿಲ್ಲಾಧಿಕಾರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದಾಗಿ ಭರವಸೆ ನೀಡಿದರು. ದಶಕಗಳಿಂದ ವಿದ್ಯುತ್ ಸಂಪರ್ಕ ಹೊಂದದೇ ಇರುವ ಪೀತಾಬೈಲು ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಮೀಪದಲ್ಲಿ ಹರಿಯುವ ತೊರೆಯನ್ನು ಬಳಸಿಕೊಂಡು ಕಿರು ವಿದ್ಯುತ್ ಯೋಜನೆಯ ಟರ್ಬೈನಿಗೆ ಚಾಲನೆ ನೀಡಿದರು. ಇಲ್ಲಿನ ಎತ್ತರ ಗುಡ್ಡದಿಂದ ಹರಿಯುವ ನೀರಿನ ತೊರೆಯಿಂದ 1.50 ಲಕ್ಷ ರು. ವೆಚ್ಚದಲ್ಲಿ ಪೈಪ್‌ಲೈನ್ ಮೂಲಕ ದಿನದ 24 ಗಂಟೆಯೂ ಮನೆಯ ಅಂಗಳಕ್ಕೆ ಬರುವಂತಹ ಯೋಜನೆಗೆ ಜಿಪಂ ಸಿಇಒ ಪ್ರಸನ್ನ ಎಚ್. ಚಾಲನೆ ನೀಡಿದರು. ತೆಂಗಮಾರು ಗ್ರಾಮದ ನಾರಾಯಣ ಗೌಡರ ನಾದುರಸ್ತಿ ಮನೆಗೆ ಭೇಟಿ ನೀಡಿದ ಡಿಸಿ, ಅವರಿಗೆ ಸುಸಜ್ಜಿತ ಮನೆ ನಿರ್ಮಿಸಿ ಕೊಡಲು ಮತ್ತು ತಿಂಗಳಮಕ್ಕಿ ಗ್ರಾಮದ ವಿಕಲಾಂಗ ಲಕ್ಷಣಗೌಡ ಅವರ ಮನೆಯ ದುರಸ್ತಿಗೆ ಅನುದಾನ ನೀಡುವಂತೆ ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ಪೀತಬೈಲು ಗ್ರಾಮದಲ್ಲಿ ಕಾಡಿನ ನಡುವೆ ಕಚ್ಛಾ ರಸ್ತೆಯಲ್ಲಿ ಕಾಲ್ನಡಿಗೆ ಸಾಗಿ ಕಾಲು ಸಂಕ ದಾಟಿ ಅಲ್ಲಿ ನಿರ್ಮಾಣದ ಹಂತದಲ್ಲಿದ್ದ ಕಿಂಡಿ ಅಣೆಕಟ್ಟು, ಸೇತುವೆವೀಕ್ಷಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು. ಪೀತಬೈಲಿನ ನಾರಾಯಣ ಗೌಡರ ಮಗಳು ಪ್ರಮೀಳಾ ಪಿಯುಸಿ ನಂತರ ಶಿಕ್ಷಣವನ್ನು ಮೊಟಕುಗೊಳಿಸಿದ ವಿಷಯ ತಿಳಿದ ಡಿಸಿ, ಶಿಕ್ಷಣವನ್ನು ಮುಂದುವರಿಸಲು ಮನವೊಲಿಸಿ, ಉಡುಪಿಯ ವಿದ್ಯಾರ್ಥಿನಿಲಯದಲ್ಲಿ ತಂಗಲು ಹಾಗೂ ನರ್ಸಿಂಗ್ ವಿದ್ಯಾಭ್ಯಾಸ ಮಾಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ದುಡಿಯುವ ಕೈಗಳಿಗೆ ಕೆಲಸ ಖಾತ್ರಿಪಡಿಸುವ ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ಕಾರ್ಡನ್ನು ಡಿಸಿ ಅಲ್ಲಿನ ಸ್ಥಳಿಯರಿಗೆ ವಿತರಿಸಿದದರು ಶೌಚಾಲಯವನ್ನು ಇಲ್ಲದ ಮನೆಗಳಿಗೆ ಪಂಚಾಯಿತಿಯ ಮೂಲಕ ಅರ್ಜಿ ಸಲ್ಲಿಸಿ, ಅನುದಾನ ಪಡೆದು ಶೌಚಾಲಯ ನಿರ್ಮಾಣ ಮಾಡಿಸಿಕೊಳ್ಳುವಂತೆ ಜಿಪಂ ಸಿಇಒ ತಿಳಿಸಿದರು. ನಾಡ್ಬಾಲು ಗ್ರಾ.ಪಂ. ಅಧ್ಯಕ್ಷ ನವೀನ್ ಕುಮಾರ್, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್., ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ದೂದ್‌ಪೀರ್, ಹೆಬ್ರಿ ತಹಸೀಲ್ದಾರ್ ಪುರಂದರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀತಲ್ ಮುತ್ತಿತರರು ಇದ್ದರು. ಕಾಲುಸಂಕದಿಂದ ನೀರಿಗೆ ಬಿದ್ದ ಎ.ಎನ್.ಎಪ್. ಸಿಬ್ಬಂದಿ ಪೀತಬೈಲು ಗ್ರಾಮದಲ್ಲಿ ಕಾಲು ಸಂಕದ ದಾಟುವಾಗ ಎ.ನ್.ಎಫ್. ಸಿಬ್ಬಂದಿ ಆಯತಪ್ಪಿ, ಕಾಲುಸಂಕದ ಮೇಲಿಂದ ಕೆಳಗೆ ತೊರೆಗೆ ಬಿದ್ದುಬಿಟ್ಟರು. ಇದನ್ನು ಕಣ್ಣಾರೆ ಕಂಡರೂ ಡಿಸಿ ಮತ್ತು ಇತರ ಅಧಿಕಾರಿಗಳು ದೈರ್ಯದಿಂದ ಅದೇ ಕಾಲು ಸಂಕದ ಮೇಲೆ ನಡೆದು ಮುಂದೆ ಸಾಗಿದರು. ನಂತರ ಇಲ್ಲಿ ನೀರಿನ ಮೂಲವನ್ನು ವೀಕ್ಷಿಸಲು ತೆರಳುವಾಗ ಮಾತ್ರ ಡಿಸಿ ಆಯತಪ್ಪಿ ನೆಲಕ್ಕೆ ಉರುಳಿದರೂ, ಗುಡ್ಡವನ್ನು ಹತ್ತಿ, ಕಿರು ಜಲ ವಿದ್ಯುತ್ ಯೋಜನೆಗೆ ಚಾಲನೆ ನೀಡಿದರು.