ಕನ್ನಡಪ್ರಭ ವಾರ್ತೆ ಅಫಜಲಪುರ
ರಾತ್ರಿ ವೇಳೆಯಲ್ಲಿಯೂ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರ ಸಂಚಾರವನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕೈಗೊಳ್ಳಲಾಗಿರುವ ವ್ಯವಸ್ಥೆಗಳ ಕುರಿತು ಸ್ಥಳದಲ್ಲೇ ಪರಿಶೀಲಿಸಿದರು. ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ, ಬೆಳಕಿನ ವ್ಯವಸ್ಥೆ, ಭಕ್ತರ ಸರದಿ ವ್ಯವಸ್ಥೆ ಹಾಗೂ ವಾಹನಗಳ ಸಂಚಾರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.ಬಳಿಕ ದೇವಲಗಾಣಗಾಪುರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಸಾರ್ವಜನಿಕರು ಹಾಗೂ ವಿವಿಧೆಡೆಯಿಂದ ಆಗಮಿಸುವ ಭಕ್ತರ ಸುಗಮ ಸಂಚಾರಕ್ಕಾಗಿ ಕೈಗೊಳ್ಳಲಾಗಿರುವ ವ್ಯವಸ್ಥೆಗಳನ್ನು ಅವಲೋಕಿಸಿದರು. ಭಕ್ತರ ಸಂಖ್ಯೆ ಹೆಚ್ಚಾಗುವ ಸಂದರ್ಭ ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ನಂತರ ಧಾರ್ಮಿಕ ದತ್ತಿ ಇಲಾಖೆಯ ವಸತಿಗೃಹಕ್ಕೆ ಭೇಟಿ ನೀಡಿ, ಭಕ್ತರ ವಾಸ್ತವ್ಯಕ್ಕೆ ಕಲ್ಪಿಸಲಾಗಿರುವ ಕೊಠಡಿಗಳ ವ್ಯವಸ್ಥೆ, ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಸಹಿತ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿದರು. ವಸತಿಗೃಹದಲ್ಲಿ ಭಕ್ತರಿಗೆ ಉತ್ತಮ ಸೇವೆ ಒದಗಿಸುವಂತೆ ಹಾಗೂ ಯಾವುದೇ ಕೊರತೆ ಕಂಡುಬಂದಲ್ಲಿ ತಕ್ಷಣವೇ ಪರಿಹರಿಸುವಂತೆ ಸೂಚಿಸಿದರು.ಗಾಣಗಾಪುರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಹಾಗೂ ದೇವಲಗಾಣಗಾಪುರ ಪೊಲೀಸ್ ಠಾಣೆಯ ಪಿಎಸ್ಐ ಸಂಗೀತಾ ಶಿಂಧೆ ಅಧಿಕಾರಿಗಳಿಗೆ ದೇವಸ್ಥಾನದಲ್ಲಿನ ವ್ಯವಸ್ಥೆಗಳು ಹಾಗೂ ಭದ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ಶಿಖರ್ ಮೋಘಾ ಇದ್ದರು.