ಒಂದು ವಾರದಲ್ಲಿ ಅರ್ಜಿ ಇತ್ಯರ್ಥಕ್ಕೆ ಡಿಸಿ ಸೂಚನೆ

KannadaprabhaNewsNetwork | Published : Jun 27, 2024 1:04 AM

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ಜನ ಸ್ಪಂದನದಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಒಂದು ವಾರದಲ್ಲಿ ಇತ್ಯರ್ಥಪಡಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಸೂಚನೆ ನೀಡಿದ್ದಾರೆ. ನಗರದ ತಹಸೀಲ್ದಾರ್‌ ಕಚೇರಿಯಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದು, ಈ ವೇಳೆ ಸುಮಾರು ಇನ್ನೂರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಜನ ಸ್ಪಂದನದಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಒಂದು ವಾರದಲ್ಲಿ ಇತ್ಯರ್ಥಪಡಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಸೂಚನೆ ನೀಡಿದ್ದಾರೆ.

ನಗರದ ತಹಸೀಲ್ದಾರ್‌ ಕಚೇರಿಯಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದು, ಈ ವೇಳೆ ಸುಮಾರು ಇನ್ನೂರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಗಳ ಅಭಿವೃದ್ಧಿ, ಮೂಲಭೂತ ಸೌಲಭ್ಯ, ಯುಕೆಪಿ ನಿವೇಶನ ಮಂಜೂರಾತಿ, ಜಮಖಂಡಿ ನಗರದಲ್ಲಿ ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಹವಾಲುಗಳನ್ನು ಪರಿಹರಿಸಲು ಸಾಧ್ಯವಾಗದ ಪಕ್ಷದಲ್ಲಿ ಸರಿಯಾದ ಕಾರಣಗಳ ಸಮೇತ ಜಿಲ್ಲಾ ಕಾರ್ಯಾಲಯಕ್ಕೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಕಡಪಟ್ಟಿ ಹುನ್ನೂರು ಗ್ರಾಪಂಗೆ ಸಂಬಂಧಿಸಿದ ಅರ್ಜಿಗಳು ಬಂದಿರುವುದರಿಂದ ಜೂನ್‌ 29ರಂದು ಗ್ರಾಮಸಭೆ ನಡೆಸುವಂತೆ ಸೂಚನೆ ನೀಡಿದರು. ನ್ಯಾಯಾಲಯ, ಯುಕೆಪಿ ಮತ್ತು ಜಮೀನು ಮಂಜೂರಾತಿ, ನಿವೇಶನ ಮಂಜೂರಾತಿ ಮುಂತಾದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಲಾಗುತ್ತದೆ. ಮುಂದೆ ಅವುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ವಿವರಿಸಿದರು.

ತಾಲೂಕಿನಲ್ಲಿ 1600 ರೈತರಿಗೆ ಬೆಳೆ ಪರಿಹಾರ ಇನ್ನೂ ಬಂದಿಲ್ಲ. ಈ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ರವೆಯನ್ನು ಸರಬರಾಜು ಮಾಡಲಾಗಿದ್ದರ ಬಗ್ಗೆ ಕೂಡ ದೂರುಗಳು ಬಂದಿವೆ. ಈ ಬಗ್ಗೆ ಅಧಿಕಾರಿಗಳೇ ಖುದ್ದಾಗಿ ಪರಿಶೀಲಿಸಿ ಆಹಾರ ಪಾರ್ಥಗಳನ್ನು ಸರಬರಾಜು ಮಾಡಲು ಸೂಚಿಸಿದ್ದಾಗಿ ತಿಳಿಸಿದರು. ಅಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಜನ ಸ್ಪಂದನ ಕಾರ್ಯಕ್ರಮಕ್ಕೆ ಗೈರಾಗಿರುವ ಎಲ್ಲ ಆಧಿಕಾರಿಗಳಿಗೆ ಶೋಕಾಸ್‌ ನೋಟೀಸ್‌ ನೀಡುವುದಾಗಿ ತಿಳಿಸಿದರು.

ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ನಗರದ ದೇಸಾಯಿ ಸರ್ಕಲ್‌ನಿಂದ ಡಾ.ಅಂಬೇಡ್ಕರ್‌ ವೃತ್ತದವರೆಗಿನ ರಸ್ತೆಯನ್ನು ಅಭಿವೃದ್ಧಿ ಪಡಿಸುವುದು ಮತ್ತು ತತ್ವಜ್ಞಾನಿ ಗುರುದೇವ ರಾನಡೆ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಪಡಿಸಲು ಮನವಿ ಮಾಡಿದರು.

ವಾಮಾಚಾರ ಮಾಡಿದವರ ವಿರುದ್ಧ ದೂರು:ಹಿಪ್ಪರಗಿ ಗ್ರಾಮದ ನಿವಾಸಿಯೊಬ್ಬ ನನ್ನ ಮೇಲೆ ವಾಮಾಚಾರವಾಗಿದೆ. ನನ್ನ ಮೇಲೆ ವಾಮಾಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜನ ಸ್ಪಂದನ ಸಭೆಯಲ್ಲಿ ಅರ್ಜಿ ಸಲ್ಲಿಸಿದ್ದು ವಿಶೇಷವಾಗಿತ್ತು. ಸಾಮಾಜಿಕ ಹೋರಾಟಗಾರ ಎರಡು, ಮೂರುಸಲ ಮನವಿಸಲ್ಲಿಸಲು ಬಂದದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ನೀನು ಏನ್‌ ಕೆಲಸ ಮಾಡ್ತಿಯಪ್ಪಾ ಎಂದು ಪ್ರಶ್ನಿಸಿದರು. ಸಬೂಬು ಹೇಳಲು ಬಂದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು ನೀನೂ ಅರ್ಜಿ ಕೊಡ್ತಿಯಾ,? ಎಂದು ಪ್ರಶ್ನಿಸಿದರು. ಸಭಾಂಗಣದಲ್ಲಿ ಸ್ಥಳಾವಕಾಶ ಕಡಿಮೆ ಇದ್ದುದರಿಂದ ಅಧಿಕಾರಿಗಳು, ಸಾರ್ವಜನಿಕರು ಕುಳಿತುಕೊಳ್ಳಲು ಸಮಸ್ಯೆಯಾಯಿತು.

ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ್‌ ಸದಾಶಿವ ಮುಕ್ಕೊಜಿ, ಸಿಪಿಐ ಮಲ್ಲಪ್ಪ ಮಡ್ಡಿ, ವೇದಿಕೆಯಲ್ಲಿದ್ದರು. ಎಲ್ಲ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.---------------------------------------

ಕೋಟ್‌

ಜಮಖಂಡಿ ನಗರದಲ್ಲಿ ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಹವಾಲುಗಳನ್ನು ಪರಿಹರಿಸಲು ಸಾಧ್ಯವಾಗದ ಪಕ್ಷದಲ್ಲಿ ಸರಿಯಾದ ಕಾರಣಗಳ ಸಮೇತ ಜಿಲ್ಲಾ ಕಾರ್ಯಾಲಯಕ್ಕೆ ಅಧಿಕಾರಿಗಳು ಮಾಹಿತಿ ನೀಡಬೇಕು. ರಾಜ್ಯಮಟ್ಟದ ಯಾವುದೇ ಅಹವಾಲುಗಳು ಬಂದಿಲ್ಲ ಎಂದು ತಿಳಿಸಿದ ಅವರು, ಮುಖ್ಯಮಂತ್ರಿಗಳು ಜನಸ್ಪಂದನ ಕಾರ್ಯಕ್ರಮದ ಕುರಿತು ಖುದ್ದಾಗಿ ಪರಿಶೀಲನೆ ಮಾಡಲಿದ್ದಾರೆ. ಅಧಿಕಾರಿಗಳು ಯಾವುದೇ ಸಬೂಬು ಹೇಳದೇ ನಿಗದಿ ಪಡಿಸಿರುವ ಸಮಯಾವಕಾಶದಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು.

- ಜಾನಕಿ.ಕೆ.ಎಂ. ಜಿಲ್ಲಾಧಿಕಾರಿ

Share this article