ನೂತನ ಕಟ್ಟಡ ಕಾಮಗಾರಿ ಪರಿಶೀಲನೆ ।
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸುಮಾರು 60 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾಧಿಕಾರಿ ಕಚೇರಿ ನೂತನ ಕಟ್ಟಡ ಮೊದಲ ಹಂತದ ಕಾಮಗಾರಿ ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ತಿಳಿಸಿದರು. ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಎರಡು ಹಂತದ ಕಾಮಗಾರಿ ಯಾಗಿದ್ದು, ಆಡಳಿತಾತ್ಮಕ ಮಂಜೂರಾತಿ ದೊರೆತ ಬಳಿಕ ಮೊದಲ ಹಂತದ 30 ಕೋಟಿ ರು.ಗಳಲ್ಲಿ 17 ಕೋಟಿ ರು. ಬಿಡುಗಡೆಯಾಗಿದೆ ಎಂದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಸೇರಿದಂತೆ ಇತರೆ ಅಧಿಕಾರಿಗಳು ಕಾಮಗಾರಿ ಪರಿಶೀಲಿಸಿದ್ದು, ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಅನುಮೋದನೆ ಆಗುವ ಮುನ್ನ ಇದ್ದ ಕಾಮಗಾರಿಗೂ ಈಗಿನ ಬೇಡಿಕೆಗಳಾದ ವೀಡಿಯೋ ಕಾನ್ಫರೆನ್ಸ್ ಹಾಲ್, ಸ್ಟ್ರಾಂಗ್ ರೂಂ, ರೆಕಾರ್ಡ್ ರೂಂ ಕೆಳಗೆ ಇರಬೇಕೆಂದು ತಿಳಿಸಲಾಗಿದೆ. ಮೊದಲನೆ ಮಹಡಿಯಲ್ಲಿ ಇವುಗಳನ್ನು ನಿರ್ಮಾಣ ಮಾಡಲು ಆಗುವುದಿಲ್ಲ ಎಂದು ಮಾಹಿತಿ ನೀಡಿದರು. ಈಗಾಗಲೇ ಈ ಸಂಬಂಧ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು, ನಕ್ಷೆಯಲ್ಲಿ ಏನೇನು ಬದಲಾವಣೆ ತರಬೇಕು. ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಆರ್‌ಒ ಸಭೆ ನಡೆಸಲು ಹಾಲ್, ಸರ್ವರ್ ರೂಂ ಮುಂತಾದವು ಎಲ್ಲೆಲ್ಲಿ ಇರಬೇಕೆಂಬ ಬಗ್ಗೆ ಸೂಚನೆ ನೀಡಿರುವುದಾಗಿ ವಿವರಿಸಿದರು. ಕಾಮಗಾರಿ ನಿರ್ಮಾಣ ಹಂತದಲ್ಲಿರುವುದರಿಂದ ಬದಲಾವಣೆ ಮಾಡಲು ಅವಕಾಶವಿದೆ. ಇಂಜಿನಿಯರ್ ಪರಿಷ್ಕೃತ ನಕ್ಷೆ ತಯಾರಿಸುತ್ತಿದ್ದಾರೆ. ನಿಗದಿಪಡಿಸಿದಂತೆ ಕಾಮಗಾರಿ ನಡೆಯುತ್ತಿದ್ದು, ಭೇಟಿ ನೀಡಿರುವುದರಿಂದ ಗುಣಮಟ್ಟದ ಕಾಮಗಾರಿ ವೇಗ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಾರ್ವಜನಿಕ ಶೌಚಾಲಯದ ಸೌಲಭ್ಯವನ್ನು ಕಾಂಪೌಂಡ್ ಹೊರ ಭಾಗದಲ್ಲಿ ನಿರ್ಮಾಣ ಮಾಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಮಿಸಿದಾಗ ಡಿಸಿ ಕಚೇರಿ ಕಾಮಗಾರಿ ವಿವರವನ್ನು ನೀಡಿ ಎಲ್ಲವೂ ಸರಿಯಾಗಿ ಇರುವಂತೆ ನೋಡಿಕೊಳ್ಳಲಾಗುವುದೆಂದು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ನೂತನ ಕಟ್ಟಡ ಮೊದಲ ಅಂತಸ್ತಿನ ಕಾಮಗಾರಿ ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್ ಕೊನೆಯಲ್ಲಿ ಮುಕ್ತಾಯಗೊಳ್ಳಲಿದೆ ಉಳಿದ ಕಾಮಗಾರಿ ಇನ್ನೊಂದುವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ, ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗವಿರಂಗಪ್ಪ ಇದ್ದರು. 29 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ನೂತನ ಕಟ್ಟಡ ಕಾಮಗಾರಿಯನ್ನು ಡಿಸಿ ಮೀನಾ ನಾಗರಾಜ್ ವೀಕ್ಷಿಸಿದರು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಗವಿರಂಗಪ್ಪ ಇದ್ದರು.