ನೀರಾವರಿ ಯೋಜನೆಗೆ ತೊಡಕಾಗಿದ್ದ ಸ್ಥಳಕ್ಕೆ ಡಿಸಿ ಭೇಟಿ

KannadaprabhaNewsNetwork |  
Published : Oct 20, 2024, 01:51 AM IST
19ಎಚ್ಎಸ್ಎನ್9: ಸಂತೇ ಶಿವರ ಹಾಗೂ ಅಗ್ರಹಾರ ಬೆಳಗುಲಿ ಯೋಜನೆಗೆ ಅಡ್ಡಿಪಡಿಸಿದ್ದ ರೈತರೊಂದಿಗೆ ಜಿಲ್ಲಾಧಿಕಾರಿ ಸತ್ಯ ಭಾಮ ಮಾತುಕತೆ ನಡೆಸಿದರು. | Kannada Prabha

ಸಾರಾಂಶ

ಚನ್ನರಾಯಪಟ್ಟಣದ ತಾಲೂಕಿನ ಸಂತೇ ಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ತುಂಬಿಸುವ ಸಲುವಾಗಿ ಕಾರೇಹಳ್ಳಿ ಸಮೀಪ ಜಾಬ್ ಘಟ್ಟ ಗ್ರಾಮದ ಬಳಿ ಇರುವ ಹೇಮಾವತಿ ನಾಲೆಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆಗೆ ಓರ್ವ ರೈತನ ವಿರೋಧದಿಂದ ಕಳೆದ ಅನೇಕ ತಿಂಗಳುಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ ನೀಡಿ ರೈತರೊಂದಿಗೆ ಶುಕ್ರವಾರ ಸಂಜೆ ಮಾತುಕತೆ ನಡೆಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಹೋಬಳಿಯ ಸಂತೇ ಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ತುಂಬಿಸುವ ಸಲುವಾಗಿ ಕಾರೇಹಳ್ಳಿ ಸಮೀಪ ಜಾಬ್ ಘಟ್ಟ ಗ್ರಾಮದ ಬಳಿ ಇರುವ ಹೇಮಾವತಿ ನಾಲೆಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆಗೆ ಓರ್ವ ರೈತನ ವಿರೋಧದಿಂದ ಕಳೆದ ಅನೇಕ ತಿಂಗಳುಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ ನೀಡಿ ರೈತರೊಂದಿಗೆ ಶುಕ್ರವಾರ ಸಂಜೆ ಮಾತುಕತೆ ನಡೆಸಿದರು. ಖ್ಯಾತ ಸಾಹಿತಿ ಡಾ.ಎಸ್ ಎಲ್ ಭೈರಪ್ಪ ಅವರ ಹುಟ್ಟೂರು ಸಂತೇ ಶಿವರ ಗ್ರಾಮದ ದೊಡ್ಡಕೆರೆ ಹಾಗೂ ಅಗ್ರಹಾರ ಬೆಳಗುಲಿ ಹೊನ್ನಾದೇವಿ ಕೆರೆಗೆ ನೀರು ಹರಿಸುವ ಸಲುವಾಗಿ ಸಾಹಿತಿ ಡಾ. ಎಸ್ ಎಲ್ ಭೈರಪ್ಪನವರು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದಿಂದ ಈ ಭಾಗದ ಕೆರೆಗಳಿಗೆ ಪೈಪ್ ಲೈನ್ ಮೂಲಕ ನೀರು ಹರಿಸುವ ಯೋಜನೆಗೆ ಸುಮಾರು 25 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಕಾರೇಹಳ್ಳಿ ಸಮೀಪದ ಜಾಬ್ ಘಟ್ಟ ಗ್ರಾಮದ ಬಳಿ ಇರುವ ನಾಗಮಂಗಲ ಹೇಮಾವತಿ ಉಪ ನಾಲೆಯಿಂದ ಪೈಪ್ ಲೈನ್ ಮೂಲಕ ಈ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆಯಾಗಿದ್ದು, ಈಗಾಗಲೇ ಶೇಕಡ 99ರಷ್ಟು ಕಾಮಗಾರಿ ಪೂರ್ಣಗೊಂಡಿದೆ, ಕಾರೇಹಳ್ಳಿ ಗ್ರಾಮದ 62 ಸರ್ವೆ ನಂಬರಿಗೆ ಸೇರಿರುವ ನಿಂಗೇಗೌಡ ಹಾಗೂ ರಂಗಸ್ವಾಮಿ ರೈತರಿಗೆ ಸುಮಾರು 1 ಎಕರೆ ಜಾಗದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಕಳೆದ ಅನೇಕ ತಿಂಗಳುಗಳಿಂದ ರೈತರು ವಿರೋಧ ವ್ಯಕ್ತಪಡಿಸಿ ಅವಕಾಶ ಕಲ್ಪಿಸಿರಲಿಲ್ಲ. ಈ ಸಂಬಂಧ ಸಂತೇ ಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮಗಳ ರೈತರು ಹಾಗೂ ರೈತ ಸಂಘದ ಮುಖಂಡರುಗಳು ಮಾಜಿ ಶಾಸಕ ಸಿಎಸ್ ಪುಟ್ಟೇಗೌಡ ಅವರನ್ನು ಭೇಟಿ ಮಾಡಿ ಯೋಜನೆ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಅವರ ಮೇಲೆ ಒತ್ತಡ ತರುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸ್ಥಳಕ್ಕೆ ಹೋಗಿ ರೈತರೊಂದಿಗೆ ಮಾತುಕತೆ ನಡೆಸಿ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಶುಕ್ರವಾರ ಸಂಜೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ವಿರೋಧ ವ್ಯಕ್ತಪಡಿಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಿ ಪೈಪ್‌ಲೈನ್ ಅಳವಡಿಕೆಗೆ ಅವಕಾಶ ಮಾಡಿಕೊಡಬೇಕು, ಇದೊಂದು ಸಾರ್ವಜನಿಕ ಯೋಜನೆಯಾಗಿದ್ದು, ಇಲ್ಲಿ ರೈತರು ಹಠ ಮಾಡುವುದು ಸರಿಯಲ್ಲ. ನೀರಾವರಿ ರಸ್ತೆ ಸೇರಿದಂತೆ ಅನೇಕ ಯೋಜನೆಗಳಿಗೆ ರೈತರು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಜಮೀನಿಗೆ ಯಾರೇ ಭೂ ಮಾಲೀಕರಾಗಿದ್ದರು ಕೂಡ ಎಲ್ಲಾ ಸ್ವತ್ತು ಸರ್ಕಾರದ ಸ್ವತ್ತಾಗಿರುತ್ತದೆ. ಈ ಬಗ್ಗೆ ನೀರಾವರಿ ವಿಚಾರದಲ್ಲಿ ತಡ ಮಾಡುವುದು ಬೇಡ. ನೀರಾವರಿ ಯೋಜನೆಗೆ ಭೂಮಿ ನೀಡಿರುವ ರೈತರಿಗೆ ನೀರಾವರಿ ಇಲಾಖೆಯಿಂದ ಪರಿಹಾರವೂ ಕೂಡ ಸಿಗಲಿದೆ, ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಭಾನುವಾರದಿಂದಲೇ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪ್ರಾರಂಭಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಯೋಜನೆಗೆ ಭೂಮಿ ಕೊಡಲು ವಿರೋಧ ವ್ಯಕ್ತಪಡಿಸುತ್ತಿದ್ದ ರೈತ ನಿಂಗೇಗೌಡ ಮಾತನಾಡಿ, ನಾವು ಪೈಪ್‌ಲೈನ್ ಅಳವಡಿಕೆಗೆ ಯಾವುದೇ ಅಡ್ಡಿಪಡಿಸುತ್ತಿಲ್ಲ. ಆದರೆ ಕೆಲವರ ಒತ್ತಡದಿಂದ ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಾವು ಪೈಪ್‌ಲೈನ್ ಅಳವಡಿಕೆಗೆ ಅವಕಾಶ ನೀಡಿರಲಿಲ್ಲ. ಆದರೆ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂಬ ಜಿಲ್ಲಾಧಿಕಾರಿಗಳ ಮಾತಿನ ಭರವಸೆಯಿಂದ ಪೈಪ್‌ಲೈನ್ ಅಳವಡಿಕೆಗೆ ತಾವು ಒಪ್ಪಿರುವುದಾಗಿ ರೈತ ನಿಂಗೇಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ನವೀನ್ ಕುಮಾರ್‌, ಕಾವೇರಿ ನೀರಾವರಿ ನಿಗಮದ ಚನ್ನರಾಯಪಟ್ಟಣ ವಿಭಾಗದ ಅಧೀಕ್ಷಕ ಎಂ ಕಿಶೋರ್‌, ಕಾರ್ಯಪಾಲಕ ಇಂಜಿನಿಯರ್ ಎ.ಆರ್.ದೀಪು ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಇಂಜಿನಿಯರ್ ಪುನೀತ್,ಬಾಗೂರು ಹೋಬಳಿ ಉಪತಾಶಿಲ್ದಾರ್ ಮೋಹನ್, ಕಂದಾಯ ಅಧಿಕಾರಿ ರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸಂತೇ ಶಿವರ ರಾಜಣ್ಣ( ಗಂಗೇಗೌಡ), ಮುಖಂಡರಾದ ಅಗ್ರಹಾರ ಬೆಳಗುಲಿ ಶಿವರಾಜ್, ದುಗ್ಗೇನಹಳ್ಳಿ ವೀರೇಶ್, ಕೆಂಪೇಗೌಡ, ಶ್ರೀನಿವಾಸ್, ರೈತ ಸಂಘದ ತಾಲೂಕು ಅಧ್ಯಕ್ಷ ಎಸ್ಎಸ್ ರಾಮಚಂದ್ರು, ಹೋಬಳಿ ಅಧ್ಯಕ್ಷ ಸೋಮಶೇಖರಯ್ಯ, ಹುಲ್ಲೇನಹಳ್ಳಿ ಶಿವಣ್ಣ , ಬೆಳಗುಲಿ ಆಟೋ ರಾಜಣ್ಣ, ಪುಟ್ಟೇಗೌಡ, ಮನು, ಹುಲ್ಲೇನಹಳ್ಳಿ ರಮೇಶ್, ಸೇರಿದಂತೆ ಸಂತೇ ಶಿವರ ಅಗ್ರಹಾರ ಬೆಳಗುಲಿ ಹುಲ್ಲೇನಹಳ್ಳಿ ದ್ಯಾವಲಾಪುರ ಗಂಜಿಗೆರೆ ಯಾಚನಘಟ್ಟ ದುಗ್ಗೇನಹಳ್ಳಿ ಭಾಗದ ನೂರಾರು ರೈತರು ಹಾಜರಿದ್ದರು.* ಹೇಳಿಕೆ-1 ಕೇವಲ ರಸ್ತೆ ವಿಚಾರವಾಗಿ ಯೋಜನೆಗೆ ಅಡ್ಡಿಪಡಿಸುವುದು ಬೇಡ. ಈಗಾಗಲೇ ಜಿಲ್ಲಾಧಿಕಾರಿಗಳು ಸರ್ವೇ ನಂಬರ್ 62ರಲ್ಲಿ ರೈತ ನಿಂಗೇಗೌಡ ಮನವಿಯಂತೆ 34 ಕುಂಟೆ ಸರ್ಕಾರಿ ಜಾಗ ಇರುವುದಾಗಿ ದಾಖಲೆಗಳಲ್ಲಿ ತಿಳಿದು ಬಂದಿದೆ. ಯಾವುದೇ ರೈತರಿಗೂ ಅನ್ಯಾಯವಾಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿಗಳು ಮಾತು ಕೊಟ್ಟಿದ್ದಾರೆ ಯೋಜನೆ ಬೇಗ ಪೂರ್ಣಗೊಂಡು ಸಂತೇ ಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸಲಿ. - ಸಿ ಎಸ್ ಪುಟ್ಟೇಗೌಡ, ಮಾಜಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ