ಕನ್ನಡಪ್ರಭವಾರ್ತೆ ತೀರ್ಥಹಳ್ಳಿ ಜಾರಿ ನಿರ್ದೇಶನಾಲಯದ ದಾಳಿಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ಅವರಿಗೆ ಆಗಿರುವ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗಿದೆ. ಇದರಲ್ಲಿ ನನ್ನ ಮತ್ತು ಸಂಸದರ ಪಾತ್ರವೂ ಇಲ್ಲ. ಆದರೆ ಡಿಸಿಸಿ ಬ್ಯಾಂಕಿನ ಘನತೆ ಉಳಿಸುವ ಮೂಲಕ ಆಗಿರುವ ರೈತರ ₹62 ಕೋಟಿ ಹಣವನ್ನು ತುಂಬಿಸಿಕೊಡುವ ನೈತಿಕ ಹೊಣೆಗಾರಿಕೆ ಹಾಲಿ ಅಧ್ಯಕ್ಷ ಮಂಜುನಾಥಗೌಡರ ಮೇಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಜಾರಿ ನಿರ್ದೇಶನಾಲಯದ ದಾಳಿಯನ್ನು ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾಡಿರುವ ಆರೋಪವನ್ನು ಖಂಡಿಸಿದರು. ಇ.ಡಿ ದಾಳಿಯಿಂದ ಹೆಚ್ಚು ಸಂತೋಷಪಟ್ಟವರು ಕಿಮ್ಮನೆಯವರೇ ಆಗಿದ್ದಾರೆ. ಇದರಲ್ಲಿ ನಮ್ಮ ಪಾತ್ರವೇ ಇಲ್ಲ. ನನಗೆ ವಾಮಮಾರ್ಗದಲ್ಲಿ ರಾಜಕೀಯ ಮಾಡುವ ಅನಿವಾರ್ಯತೆಯೂ ಇಲ್ಲ ಎಂದರು. ಮಂಜುನಾಥಗೌಡರ ಬಗ್ಗೆ ವಿಧಾನಸಭೆಯಲ್ಲಿ ಮತ್ತು ಜಿಲ್ಲಾಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕಿಮ್ಮನೆ ವಿಷ ಕಾರಿರುವುದು ಜಿಲ್ಲೆಗೇ ತಿಳಿದಿದೆ. ನಮ್ಮದೇ ಆದ ಬಲಿಷ್ಠ ಸಂಘಟನೆ ಹೊಂದಿರುವ ನನಗೆ ಬೇರೆಯವರ ವಿರುದ್ಧ ಚಿತಾವಣೆ ನಡೆಸುವ ಅಗತ್ಯವಿಲ್ಲ. ಇವರಿಬ್ಬರೂ ಸೇರಿ ಚುನಾವಣೆ ಮಾಡಿದರೂ ನನ್ನನ್ನು ಸೋಲಿಸಲಾಗಿಲ್ಲ. ತಾನು ಗಾಂಧಿವಾದಿ ಎಂದು ಹೇಳಿಕೊಳ್ಳುವ ಕಿಮ್ಮನೆ ಬಳಸುವ ಭಾಷೆ ಸರಿಯಿಲ್ಲ. ಈಗಲಾದರೂ ತಮ್ಮ ಮಾತಿನ ವರಸೆ ಬದಲಿಸಿಕೊಳ್ಳಬೇಕು ಎಂದೂ ಟಾಂಗ್ ನೀಡಿದರು. ನಕಲಿ ಬಂಗಾರದ ಪ್ರಕರಣ ₹62 ಕೋಟಿ ಆಗಿದ್ದು, ಈಗ ಅದರ ಮೌಲ್ಯ ಒಂದೂವರೆ ಕೋಟಿಗೂ ಮೀರಿದೆ. ರೈತರ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಟ ಮಾಡಿದೀನಿ ಹೊರತು, ವೈಯಕ್ತಿಕ ದ್ವೇಷದಿಂದಲ್ಲಾ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಕೇಸ್ ಪುನಃ ಓಪನ್ ಆಗಿದೆ. ಕಿಮ್ಮನೆ ರತ್ನಾಕರ್ ಸೇರಿ ಈ ಹಣ ಕಟ್ಟಿದರೆ ಇಬ್ಬರನ್ನೂ ನಾವೇ ಸನ್ಮಾನ ಮಾಡ್ತೀವಿ ಎಂದೂ ವಾಗ್ದಾಳಿ ನಡೆಸಿದರು. ಸದನದಲ್ಲಿ ಕಿಮ್ಮನೆ ರತ್ನಾಕರ್ ಗೌಡರ ವಿರುದ್ದ ಆಡಿದ ಮಾತು ಮತ್ತು ಸಚಿವ ಮಧು ಬಂಗಾರಪ್ಪ ಕಿಮ್ಮನೆ ವಿರುದ್ದ ಆಡಿರುವ ಮಾತಿನ ಆಡಿಯೋ ತುಣುಕುಗಳನ್ನು ಕೇಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೆ.ನಾಗರಾಜ ಶೆಟ್ಟಿ, ಸಂದೇಶ್ ಜವಳಿ ಹಾಗೂ ಚಂದವಳ್ಳಿ ಸೋಮಶೇಕರ್ ಇದ್ದರು. - - - -07ಟಿಟಿಎಚ್01: ತೀರ್ಥಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.