- ಸಿ.ಟಿ. ರವಿ, ಕೆ.ಎಸ್. ಆನಂದ್ ಫಸ್ಟ್ ಟೈಂ ಸ್ಪರ್ಧೆ । ದೋಸ್ತಿಗಳ ಅವಿರೋಧ ಆಯ್ಕೆಗೆ ತಣ್ಣೀರು ಎರಚಿದ್ರಾ ನಿರಂಜನ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ)ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು ಮಂದಿ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಸ್ಪರ್ಧೆ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.ಈಗಾಗಲೇ ಮಾಜಿ ಶಾಸಕರಾದ ಡಿ.ಎಸ್. ಸುರೇಶ್ ಹಾಗೂ ಬೆಳ್ಳಿ ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಕಡೂರು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಸ್ಪರ್ಧೆ ಮಾಡಿದ್ದಾರೆ. ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸಹ ಕಣದಲ್ಲಿದ್ದಾರೆ.
ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಸಿ.ಟಿ. ರವಿ ಅವರು ಬಿಜೆಪಿ ಮುಖಂಡರನ್ನು ನಿಲ್ಲಿಸಿ ಚುನಾವಣಾ ಕಾರ್ಯತಂತ್ರ ರೂಪಿಸು ತ್ತಿದ್ದರು. ಆದರೆ, ಈ ಬಾರಿ ಅವರೇ ಕಣಕ್ಕೆ ಇಳಿದಿದ್ದಾರೆ. ಹಾಗಾಗಿ ಯಕ್ಷ ಪ್ರಶ್ನೆಯಾಗಿದೆ.ಕಾರ್ಯ ತಂತ್ರವೇ ?
ಕಾರಣ, ಕಳೆದ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಎಂ.ಎಸ್. ನಿರಂಜನ್ ಹಾಗೂ ಬಿಜೆಪಿ ಮುಖಂಡರಾದ ಕಬ್ಬಿಣ ಸೇತುವೆಯ ಸತೀಶ್ ಅವರು ಸ್ಪರ್ಧೆ ಮಾಡಿದ್ದಾಗ, ಅವರನ್ನು ಗೆಲ್ಲಿಸಲು ಬಿಜೆಪಿ ಹರ ಸಾಹಸ ಮಾಡಿತ್ತು. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕಬಹುದೆಂಬ ಕಾರಣಕ್ಕೆ ಕೆಲವು ಸೊಸೈಟಿಗಳು ಮತ ಚಲಾವಣೆ ಮಾಡುವ ಹಕ್ಕನ್ನು ಕಳೆದುಕೊಳ್ಳುವ ತಂತ್ರಗಾರಿಕೆ ಮಾಡಿದ್ದರಿಂದ ಇದು ನ್ಯಾಯಾಲಯದ ಮೆಟ್ಟಿಲು ಕೂಡ ಏರಿತ್ತು.
ಕಡೂರು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಕ್ಷೇತ್ರ ದಿಂದ ಸ್ಪರ್ಧೆ ಮಾಡಿದ್ದಾರೆ. ಇಲ್ಲಿ ಒಟ್ಟು 7 ಸಹಕಾರ ಸಂಘಗಳು ಮತದಾನ ಮಾಡುವ ಹಕ್ಕನ್ನು ಹೊಂದಿದ್ದು, ಒಂದು ಸ್ಥಾನಕ್ಕೆ ಶಾಸಕರು ಸೇರಿದಂತೆ ಕೊಪ್ಪದ ಎಚ್.ಕೆ. ದಿನೇಶ್ ಕಣದಲ್ಲಿದ್ದಾರೆ. ನಾಲ್ಕು ಮತಗಳನ್ನು ಪಡೆಯುವವರು ಜಯಶೀಲರಾಗುತ್ತಾರೆ.--- ಬಾಕ್ಸ್ ---ನಿರಂಜನ್ ಮತ್ತೆ ರೇಬಲ್ ಆಗ್ತಾರಾ ?ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಎಂ.ಎಸ್. ನಿರಂಜನ್ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಪರವಾಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುದ್ದೆಯಿಂದ ಕೈ ಬಿಡಲಾಗಿತ್ತು. ಆದರೆ, ನಂತರ ನಡೆದ ವಿಧಾನಸಭಾ ಚುನಾವಣೆ ವೇಳೆ ಅವರನ್ನು ಮತ್ತೆ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿತ್ತು. ಇದೀಗ ಅವರು ಸಿ.ಟಿ. ರವಿ ಸ್ಪರ್ಧೆ ಮಾಡಿರುವ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮುಂದುವರಿದಿದ್ದರಿಂದ ಅಂದರೆ, ದೋಸ್ತಿಗಳ ಅವಿರೋಧ ಆಯ್ಕೆಗೆ ಅಡ್ಡಿಯಾಗಿದ್ದರೆಂಬ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಮತ್ತೆ ನಿರಂಜನ್ ವಿರುದ್ಧ ಕ್ರಮವಾಗುತ್ತಾ, ನಿರಂಜನ್ ಜಯಗಳಿಸಿದರೆ ಬಿಜೆಪಿ ಶುಭಾ ಹಾರೈಸುತ್ತಾ, ಈ ಪ್ರಶ್ನೆಗಳಿಗೆ ಜ. 17 ರಂದು ನಡೆಯಲಿರುವ ಚುನಾವಣೆಯಲ್ಲಿ ಉತ್ತರ ಸಿಗಲಿದೆ.