ಚಾಮರಾಜನಗರ: ಜಿಲ್ಲೆಯಲ್ಲಿ ಹೆಚ್ಚು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಲಪಾತ, ಜಲಾಶಯಗಳು, ಇನ್ನಿತರ ಅಪಾಯಕಾರಿ ಪ್ರವಾಸಿ ನೀರಿನ ತಾಣಗಳಲ್ಲಿ ಪ್ರವಾಸಿಗರು ಸಾರ್ವಜನಿಕರು ನೀರಿಗೆ ಇಳಿಯಬಾರದೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆ ಜಲಪಾತ, ಜಲಾಶಯಗಳು, ಪ್ರವಾಸಿ ನೀರಿನ ಸ್ಥಳಗಳು, ನದಿ ಸೆಳೆತದ ಪ್ರದೇಶಗಳು, ಪ್ರವಾಹ ಸ್ಥಳಗಳಲ್ಲಿ ಪ್ರವಾಸಿಗರು ಸಾರ್ವಜನಿಕರು ನೀರಿಗೆ ಇಳಿಯಬಾರದು. ಮಳೆ ಗಾಳಿಯಂತಹ ಅಪಾಯಕಾರಿ ಸನ್ನಿವೇಶದಲ್ಲಿ ಯಾವುದೇ ಅನಾಹುತಗಳಿಗೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಳೆ ಪ್ರವಾಹ ಸಂದರ್ಭದಲ್ಲಿ ನೀಡಲಾಗುವ ಎಚ್ಚರಿಕೆಯ ಸಂದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಜಲಪಾತ ಇನ್ನಿತರ ಜಲತಾಣ ಪ್ರವಾಸಿ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಗಸ್ತು ಹೆಚ್ಚಿಸಬೇಕು. ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಮಳೆ ಪ್ರವಾಹ ಸಂದರ್ಭದಲ್ಲಿ ಕಣ್ಗಾವಲು ತೀವ್ರಗೊಳಿಸಬೇಕು. ಪ್ರವಾಸಿಗರು ನೀರಿನ ಬಳಿ ತೆರಳದಂತೆ ಎಚ್ಚರಿಕೆಯ ಫಲಕಗಳನ್ನು ಮತ್ತಷ್ಟು ಎದ್ದು ಕಾಣುವಂತೆ ಅಳವಡಿಸಬೇಕು. ನೀರಿನ ರಭಸ ಹೆಚ್ಚಿನ ಗಾಳಿ, ಪ್ರತಿಕೂಲ ಸಂದರ್ಭದಲ್ಲಿ ಸಾರ್ವಜನಿಕರು ಪ್ರವಾಸಿಗರ ಸುರಕ್ಷತೆಗೆ ತುರ್ತು ಗಮನಹರಿಸಬೇಕು ಎಂದರು.ಕ್ವಾರಿ, ಗಣಿಗಾರಿಕೆ ಪ್ರದೇಶಗಳ ನೀರು ನಿಲ್ಲುವ ಸ್ಥಳಗಳಲ್ಲಿ ಸೂಚನಾ ಎಚ್ಚರಿಕೆ ಫಲಕಗಳನ್ನು ಹಾಕಬೇಕು. ಅಪಾಯ ಸಂಭವಿಸಬಹುದಾದ ಸ್ಥಳಗಳಲ್ಲಿ ಸಾರ್ವಜನಿಕರು ಪ್ರವೇಶಿಸದಂತೆ ಸುರಕ್ಷಿತ ಬೇಲಿ ಹಾಕಬೇಕು. ಈ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ದೇಶನವನ್ನು ಸಂಬಂಧಪಟ್ಟ ಗಣಿ, ಕ್ವಾರಿ ಪ್ರದೇಶಗಳ ಮಾಲೀಕರಿಗೆ ನೀಡಬೇಕು ಎಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಯೋಜನಾ ನಿರ್ದೇಶಕರಾದ ಕಿರಣ್ ಪಡ್ನೇಕರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ರಾಜೇಶ್, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.