ಚಾಮರಾಜನಗರ: ಜಿಲ್ಲೆಯಲ್ಲಿ ಜನನ-ಮರಣ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ಡಿಜಿಟಲೀಕರಣಗೊಳಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮಾನ್ಯವಾಗಿ ಜನನ ಪ್ರಮಾಣಪತ್ರಗಳನ್ನು ೨೧ ದಿನದೊಳಗೆ ನೀಡಬೇಕಾಗಿದೆ. ಜನನ ಮರಣ ಪ್ರಮಾಣ ಪತ್ರಗಳನ್ನು ಡಿಜಿಟಲೀಕರಣ ಮಾಡುವುದರಿಂದ ಜನರು ಕಚೇರಿಗೆ ಅಲೆದಾಡುವುದು ತಪ್ಪಲಿದೆ. ನಮ್ಮ ಜಿಲ್ಲೆಗೆ ಸಂಬಂಧಿಸಿದ ಜನನ ಮರಣ ಪತ್ರಗಳು ಬೇರೆ ಜಿಲ್ಲೆಗಳಲ್ಲಿದ್ದರೂ ಅದನ್ನು ತರಿಸಿಕೊಳ್ಳುವ ಕೆಲಸವಾಗಬೇಕು. ಸಂಬಂಧಿಸಿದ ತಾಲೂಕು ಕಚೇರಿಗಳಲ್ಲಿ ತಾಲೂಕುವಾರು ಹಾಗೂ ವರ್ಷಾವಾರು ದಾಖಲೆಗಳನ್ನು ಸಂಗ್ರಹಿಸಿಡುವ ಕಾರ್ಯ ಆದ್ಯತೆ ಮೇರೆಗೆ ಆಗಬೇಕು ಎಂದರು.
ಪರಿಶಿಷ್ಟ ಪಂಗಡಗಳ ಆದಿವಾಸಿ ಜನರು ವಾಸಿಸುವ ಜಿಲ್ಲೆಯ ಹಾಡಿ-ಪೋಡುಗಳಲ್ಲಿನ ಮಕ್ಕಳಿಗೆ ಜನನ ಪ್ರಮಾಣಪತ್ರಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಬೇಕು. ಜನನ ಪ್ರಮಾಣ ಪತ್ರಗಳು ದೊರಕದೇ ಶಾಲೆಗೆ ಸೇರಲು ಸಾಧ್ಯವಾಗುತ್ತಿಲ್ಲವೆಂಬ ದೂರುಗಳು ಬರಬಾರದು. ಜನನ ಮರಣ ಪ್ರಮಾಣ ಪತ್ರಗಳ ನೀಡುವಿಕೆ ಕುರಿತ ಮಾಹಿತಿಯನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರದರ್ಶಿಸಬೇಕು. ಮರಣ ಪ್ರಮಾಣಪತ್ರಗಳಲ್ಲಿ ಎಲ್ಲ ವಿಷಯಗಳನ್ನು ಕ್ರಮಬದ್ಧವಾಗಿ ದಾಖಲಿಸುವಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ನಿಗಾ ವಹಿಸುವಂತೆ ನಿರ್ದೇಶನ ನೀಡಿದರು.