ಕನ್ನಡಪ್ರಭ ವಾರ್ತೆ ತುರುವೇಕೆರೆ
ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಹಣ ಕೇಳಿದರೆ ಡಿಸಿಎಂ ಲಿಂಕ್ ಕೆನಾಲ್ ವಿರೋಧ ಮಾಡದಿದ್ದರೆ ಮಾತ್ರ ಹೆಚ್ಚಿನ ಹಣ ನೀಡುವುದಾಗಿ ಹೇಳುವ ಮೂಲಕ ಶಾಸಕನಾಗಿರುವ ನನಗೆ ಆಮಿಷ ಒಡ್ಡಿದ್ದಾರೆ ಎಂದು ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಡಿಸಿಎಂ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಚಾಲನೆಯಲ್ಲಿದೆ. ತಿಪಟೂರು, ಗುಬ್ಬಿ ತಾಲೂಕಿನಲ್ಲಿ ಕಾಮಗಾರಿ ಮಾಡಲು ತಲಾ 50 ಕೋಟಿ ರು. ನೀಡಲಾಗಿದೆ. ಆದರೆ ತುರುವೇಕೆರೆಗೆ ಕೇವಲ 30 ಕೋಟಿ ರು. ನೀಡಲಾಗಿದೆ. ಇದು ತಾರತಮ್ಯ. ಈ ಬಗ್ಗೆ ಉಪ ಮುಖ್ಯಮಂತ್ರಿಗಳನ್ನು ಕೇಳಿದರೆ, ಲಿಂಕ್ ಕೆನಾಲ್ ಗೆ ತಡೆ ಒಡ್ಡದಿದ್ದರೆ 50 ಕೋಟಿ ಕೊಡ್ತೇನೆ ಎಂದು ಆಮಿಷ ಒಡ್ಡುತ್ತಾರೆ. ಇದು ಸರಿಯಲ್ಲ. ನಮಗೆ ಜಿಲ್ಲೆಯ ರೈತ ಹಿತ ಮುಖ್ಯವೇ ಹೊರೆತು ಅವರು ನೀಡುವ ಆಮಿಷವಲ್ಲ. ಅವರ ದುಡ್ಡೇ ಬೇಡ ಗಣಿಭಾದಿತ ಪ್ರದೇಶವೆಂದು ಗಣಿ ಮಾಲೀಕರು ಸುಮಾರು 300 ಕೋಟಿ ಹಣ ನೀಡಿದ್ದಾರೆ. ಅದರಲ್ಲಿ ವಿತರಣೆ ಮಾಡಲು ಅವರಿಗೇನು ಕಷ್ಟ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಗುಡುಗಿದರು.
ತಾಲೂಕಿನಲ್ಲಿ ಅತ್ಯಂತ ಹಿಂದುಳಿದಿರುವ ದಬ್ಬೇಘಟ್ಟ ಹೋಬಳಿಯ ಸುಮಾರು 29 ಕೆರೆಗಳಿಗೆ ನೀರು ಹರಿಸುವ ಏತನೀರಾವರಿ ಯೋಜನೆ ಪೂರ್ಣಗೊಳ್ಳಲು ಅಗತ್ಯವಿರುವ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆಗೊಳಿಸಬೇಕು. ಈ ಕಾಮಗಾರಿ ಆದಲ್ಲಿ ಬಹುಪಾಲು ನೀರಿನ ಸಮಸ್ಯೆಯನ್ನು ಬಗೆಹರಿಸಿದಂತಾಗುತ್ತದೆ. ಈಗಾಗಲೇ ಮಲ್ಲಾಘಟ್ಟ ಕೆರೆಯಿಂದ ಕಾಮಗಾರಿ ಆರಂಭವಾಗಿದೆ. ಮಲ್ಲಾಘಟ್ಟದ ಬಳಿ ಜಾಕ್ವೆಲ್ ನಿರ್ಮಿಸಲಾಗಿದೆ. ಅಲ್ಲಿಂದ ನೀರು ಹರಿಸುವ ಸಲುವಾಗಿ ಪೈಪ್ ಲೈನ್ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಈಗಾಗಲೇ ವೈಟಿ ರಸ್ತೆ ವರೆಗೆ ಪೈಪ್ ಲೈನ್ ಕಾಮಗಾರಿ ಮುಗಿದಿದೆ. ಒಟ್ಟು 48 ಕೋಟಿ ಯೋಜನೆಗೆ ಸರ್ಕಾರ ಕೇವಲ 9 ಕೋಟಿಯಷ್ಟು ಹಣ ಮಾತ್ರ ಬಿಡುಗಡೆಗೊಳಿಸಿದೆ. ಉಳಿದ ಹಣವನ್ನು ಕೂಡಲೇ ಬಿಡುಗಡ ಮಾಡಬೇಕೆಂದು ಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.ಈ ಸಂಧರ್ಭದಲ್ಲಿ ಜೆಡಿಎಸ್ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಎಪಿಎಂಸಿ ಮಾಜಿ ಸದಸ್ಯರಾದ ವಿಜಯೇಂದ್ರ, ಮಂಗೀಕುಪ್ಪೆ ಬಸವರಾಜು, ಅರಿಶಿನದ ಹಳ್ಳಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.