ಮುಂಡರಗಿ: ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ಮಂಗಳವಾರ ಸಂಜೆ ತುಂಗಭದ್ರಾ ನದಿಗೆ ಮೂರು ಮಕ್ಕಳನ್ನು ಎಸೆದು ತಾನೂ ಆತ್ಮಹತ್ಯೆ ಮಾಡಿದ್ದ ಮಂಜಪ್ಪ ಅರಕೇರಿ ಹಾಗೂ ಮಕ್ಕಳ ಮೃತದೇಹಗಳು ಗುರುವಾರ ಬೆಳಗ್ಗೆ ಪತ್ತೆಯಾಗಿವೆ.
ಬುಧವಾರ ರಾತ್ರಿಯೇ ಮೃತ ಮಂಜಪ್ಪನ ಹೆಂಡತಿ ಅಣ್ಣನ ಮಗ ವೇದಾಂತನ ಮೃತದೇಹ ಪತ್ತೆಯಾಗಿತ್ತು. ಕೊರ್ಲಹಳ್ಳಿ ಮೀನುಗಾರರು, ಪೊಲೀಸರು ಹಾಗೂ ಅಗ್ನಿಶಾಮಕದಳ ಮತ್ತು ಗ್ರಾಮಸ್ಥರ ಸಹಕಾರದಿಂದ ಗುರುವಾರ ಬೆಳಗ್ಗೆ ಮಕ್ಕಳಾದ ಪವನ್ ಅರಕೇರಿ, ಧನ್ಯಾ ಅರಕೇರಿ ಹಾಗೂ ಘಟನೆಗೆ ಕಾರಣನಾದ ಮಂಜಪ್ಪ ಅರಕೇರಿ ಮೃತದೇಹ ಪತ್ತೆಯಾಯಿತು.ಒಟ್ಟು ನಾಲ್ಕು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಡರಗಿ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಸಂಜೆ ನಾಲ್ಕು ಗಂಟೆಯ ನಂತರ ಕುಟುಂಬದವರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.
ಶೋಕ ಸಾಗರದಲ್ಲಿ ಗ್ರಾಮ: ಘಟನೆಯ ಹಿನ್ನೆಲೆಯಲ್ಲಿ ಇಡೀ ಊರಲ್ಲಿ ನೀರವ ಮೌನ ಆವರಿಸಿತ್ತು. ಮಧ್ಯಾಹ್ನ ನಾಲ್ಕು ಗಂಟೆಯಿಂದ ಬಸ್ ನಿಲ್ದಾಣದ ಹತ್ತಿರ ಶವಗಳಿಗಾಗಿ ಗ್ರಾಮಸ್ಥರು ಕಾಯುತ್ತಾ ನಿಂತಿದ್ದು ಕಂಡು ಬಂದಿತು. ಮೃತದೇಹಗಳು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಕಣ್ಣೀರು ಹಾಕಿದರು.ಬತ್ತಿ ಹೋದ ತಾಯಂದಿರ ಕಣ್ಣೀರು:ಮಂಗಳವಾರ ಸಂಜೆ ಈ ದುರ್ಘಟನೆಯ ವಿಷಯ ತಿಳಿದಾಗಿನಿಂದಲೂ ಮೃತ ಮಕ್ಕಳ ತಾಯಿ ಹಾಗೂ ಮಂಜಪ್ಪನ ತಾಯಿ ದೇವಕ್ಕ ಹಾಗೂ ಮಂಜಪ್ಪನ ಪತ್ನಿ ಪಾರವ್ವ ಹಾಗೂ ಇನ್ನೊಂದು ಮಗುವಿನ ತಂದೆ ಮಂಜಪ್ಪ ಡಂಬಳ ಹಾಗೂ ಸುಶೀಲಮ್ಮ ಹಾಗೂ ಅವರೆಲ್ಲ ಕುಟುಂಬಸ್ಥರು ಅತ್ತು ಅತ್ತು ಅವರ ಕಣ್ಣೀರು ಬತ್ತಿದಂತಾಗಿ, ಗಂಟಲು ಒಣಗಿ ಬಾಯಿಂದ ಮಾತೇ ಕೇಳದಂತಾಗಿತ್ತು. ಆಗಾಗ್ಗೆ ಎರಡೂ ಮಕ್ಕಳ ತಾಯಂದಿರು ಪ್ರಜ್ಞೆ ಕಳೆದುಕೊಂಡಿದ್ದು ಉಂಟು.
ಅಂತ್ಯ ಸಂಸ್ಕಾರ:ಸಂಜೆ 5.30ರ ನಂತರ ಮಕ್ತುಂಪುರದಲ್ಲಿ ಪವನ್, ಧನ್ಯಾ ಹಾಗೂ ವೇದಾಂತ ಡಂಬಳ ಮೂರು ಮಕ್ಕಳನ್ನು ಉಪ್ಪಾರ ಸಮುದಾಯದಂತೆ ಮಣ್ಣು ಮಾಡಿದರೆ, ಈ ಇಡೀ ಘಟನೆಗೆ ಕಾರಣವಾದ ಮಂಜಪ್ಪ ಅರಕೇರಿ ಮೃತ ದೇಹ ದಹನ ಮಾಡಲಾಯಿತು.ನನ್ನ ಮೇಲಾಯಿತು, ನನ್ನ ಮಕ್ಕಳ ಮೇಲಾಯಿತು ಅಪಾರ ಪ್ರೀತಿ ಹೊಂದಿದ್ದ ಮಂಜಪ್ಪ ಹೀಗೇಕೆ ಮಾಡಿದ ಎನ್ನುವುದೇ ತಿಳಿಯದಂತಾಗಿದೆ. ನನಗೆ ನಿರಂತರವಾಗಿ ಪೋನ್ ಮಾಡಿ ಮಾತನಾಡುತ್ತಿದ್ದ. ಆದರೆ ತನ್ನ ಜೀವ ಕಳೆದುಕೊಳ್ಳುವ ಜತೆಗೆ ತನ್ನೆರಡು ಮಕ್ಕಳು ಹಾಗೂ ನನ್ನ ಮಗನನ್ನು ಈ ದುರ್ಘಟನೆಯಲ್ಲಿ ಈಡು ಮಾಡಿರುವುದು ನೋವುಂಟು ಮಾಡಿದೆ ಎಂದು ಮೃತ ವೇದಾಂತನ ತಂದೆ ಮಂಜಪ್ಪ ಡಂಬಳ ಹೇಳಿದರು.