ರಾಮದೇವರ ಹಳ್ಳದಲ್ಲಿ ಹುಲಿಯ ಶವ ಪತ್ತೆ

KannadaprabhaNewsNetwork |  
Published : Feb 11, 2025, 12:48 AM IST
10ಎಚ್ಎಸ್ಎನ್19 : ರಾಮದೇವರಹಳ್ಳದ ನೀರಿನಲ್ಲಿ ತೇಲುತ್ತಿರುವ ಹುಲಿ ದೇಹ. | Kannada Prabha

ಸಾರಾಂಶ

ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಜಿಲ್ಲೆಯ ಅಡಗೂರು ಸಮೀಪದ ರಾಮದೇವರಹಳ್ಳದ ಬಳಿ ಪತ್ತೆಯಾಗಿದೆ. ಸುಮಾರು 3 ವರ್ಷದ ಹುಲಿ ಇದಾಗಿದ್ದು, ಹುಲಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಳ್ಳದ ನೀರಿನಲ್ಲಿ ದೈತ್ಯಾಕಾರದ ಹುಲಿ ಸತ್ತು ಬಿದ್ದಿದೆ. ಸ್ಥಳೀಯರು ಹಳ್ಳದ ಕಡೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಜಿಲ್ಲೆಯ ಅಡಗೂರು ಸಮೀಪದ ರಾಮದೇವರಹಳ್ಳದ ಬಳಿ ಪತ್ತೆಯಾಗಿದೆ. ಸುಮಾರು 3 ವರ್ಷದ ಹುಲಿ ಇದಾಗಿದ್ದು, ಹುಲಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಳ್ಳದ ನೀರಿನಲ್ಲಿ ದೈತ್ಯಾಕಾರದ ಹುಲಿ ಸತ್ತು ಬಿದ್ದಿದೆ. ಸ್ಥಳೀಯರು ಹಳ್ಳದ ಕಡೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲೆಯಲ್ಲಿ ಸೆರೆ ಹಿಡಿದಿದ್ದ ಹುಲಿಗೆ ರೇಡಿಯೋ ಕಾಲರ್‌ ಅಳವಡಿಸಿ ಚಿಕ್ಕಮಗಳೂರು ಜಿಲ್ಲೆಯ ಭದ್ರ ಅಭಯಾರಣ್ಯಕ್ಕೆ ಬಿಡಲಾಗಿತ್ತು. ಆದರೆ ಇದೀಗ ಅದೇ ಹುಲಿ ಜಿಲ್ಲೆಯ ಹಳೇಬೀಡು ವ್ಯಾಪ್ತಿಯಲ್ಲಿರುವ ರಾಮದೇವರಹಳ್ಳದ ಅರಣ್ಯದಲ್ಲಿರುವ ಹಳ್ಳದಲ್ಲಿ ಸಾವನ್ನಪ್ಪಿದೆ.

ಪ್ರಾಣಿಗಳಿಗೂ ವ್ಯಾಪ್ತಿ ಇದೆ: ಜನವಸತಿ ಪ್ರದೇಶಗಳಲ್ಲಿ ತೊಂದರೆ ಕೊಡುವ ಪ್ರಾಣಿಗಳನ್ನು ಅರಣ್ಯ ಇಲಾಖೆಯಿಂದ ಹಿಡಿದು ದೂರದ ಅರಣ್ಯ ಬಿಡಲಾಗುತ್ತದೆ. ಆದರೆ, ಪ್ರಾಣಿಗಳಲ್ಲೂ ತನ್ನ ಕಾಡು, ತನ್ನ ಕುಟುಂಬ ಎನ್ನುವ ವ್ಯವಸ್ಥೆ ಇದ್ದು, ಅವು ದೂರದ ಅರಣ್ಯ ಪ್ರದೇಶಕ್ಕೆ ಹೊಂದಿಕೊಳ್ಳಲಾರವು. ಹಾಗಾಗಿಯೇ ಅವುಗಳನ್ನು ಹಿಡಿದು ದೂರದ ಕಾಡುಗಳಲ್ಲಿ ಬಿಟ್ಟರೂ ಬಿಟ್ಟ ಕೆಲವೇ ದಿನಗಳಲ್ಲಿ ಅವು ತನ್ನ ಮೂಲ ಕಾಡಿಗೆ ಮರಳಿರುವ ಹಲವು ಉದಾಹರಣೆಗಳಿವೆ. ಅದರಲ್ಲೂ ಕ್ರೂರ ಪ್ರಾಣಿಗಳಾದ ಹುಲಿಗಳು ತಾನು ವಾಸಿಸುವ ಕಾಡಿನಲ್ಲಿಯೇ ನಿಗದಿತ ಪ್ರದೇಶವನ್ನು ಗುರುತು ಮಾಡಿಕೊಂಡಿರುತ್ತವೆ. ಒಂದು ಗುಂಪಿನ ಹುಲಿ ಮತ್ತೊಂದು ಗುಂಪಿನ ಹುಲಿಗಳು ವಾಸಿಸುವ ವ್ಯಾಪ್ತಿಗೆ ಹೋಗುವುದಿಲ್ಲ. ಹುಲಿಗಳು ಮೂತ್ರ ಸಿಂಪಡಿಸುವ ಮೂಲಕ ತಮ್ಮ ವ್ಯಾಪ್ತಿಯನ್ನು ಗುರುತು ಮಾಡುತ್ತವೆ. ತಮ್ಮ ವ್ಯಾಪ್ತಿಯೊಳಗೆ ಬೇರೆ ಹುಲಿ ಬಂದು ಹೋದರೆ ಮೂಲ ನಿವಾಸಿಗಳಾದ ಹುಲಿ ಗುಂಪಿಗೆ ಅದು ಗೊತ್ತಾಗುತ್ತದೆ. ಒಂದು ವೇಳೆ ಆ ಹುಲಿ ಸಿಕ್ಕರೆ ಕಾಳಗಕ್ಕೆ ಇಳಿಯುತ್ತವೆ. ಇಂತಹ ಸಂದರ್ಭದಲ್ಲಿ ಸಾವು ಕೂಡ ಸಂಭವಿಸಬಹುದು. ಹಾಗಾಗಿ ಒಂದು ಪ್ರದೇಶದ ಹುಲಿ ಮತ್ತೊಂದು ಪ್ರದೇಶದಲ್ಲಿ ಬದುಕುವುದು ಕಷ್ಟವಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಹಿಡಿದ ಹುಲಿಯನ್ನು ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿತ್ತಾದರೂ, ಅದಕ್ಕೆ ಅಲ್ಲಿ ಬದುಕಲಾಗದೆ ಮೈಸೂರಿನ ದಿಕ್ಕನ್ನೇ ಅನುಸರಿಸಿ ಪ್ರಯಾಣ ಬೆಳೆಸಿದೆ.

ಹಾಸನ ಜಿಲ್ಲೆಯಲ್ಲಿ ಹುಲಿಯ ಒಂದೂ ಸಂತಾನವಿಲ್ಲ. ಆದರೆ, ಇದೀಗ ರಾಮದೇವರಹಳ್ಳದಲ್ಲಿ ಹುಲಿ ದೇಹ ಪತ್ತೆಯಾಗಿದೆ. ತನ್ನ ಮೂಲ ಕಾಡಿನತ್ತ ಹೊರಟ ಹುಲಿ ಮಾರ್ಗಮಧ್ಯೆ ಸಾವನ್ನಪ್ಪಿದೆ.

*ಬಾಕ್ಸ್‌ ನ್ಯೂಸ್‌....

ರಾಮದೇವರ ಹಳ್ಳದ ಮೀಸಲು ಅರಣ್ಯದಲ್ಲಿ ಗಂಧದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹಾಗಾಗಿಯೇ ಈ ಭಾಗದಲ್ಲಿ ಗಂಧದ ಮರಗಳ್ಳರ ಹಾವಳಿ ಕೂಡ ಹೆಚ್ಚಿದೆ. ಈ ಹಿಂದೆಯೂ ಹಲವಾರು ಬಾರಿ ಇಲ್ಲಿ ಗಂಧದ ಮರಗಳನ್ನು ಕಡಿದ ಪ್ರಕರಣಗಳು ದಾಖಲಾಗಿವೆ. ಒಮ್ಮೆ ಮರಗಳ್ಳರು ಹಾಗೂ ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದು ಮರಗಳ್ಳನೊಬ್ಬ ಸಾವನ್ನಪ್ಪಿದ್ದ. ಜತೆಗೆ ಈ ಭಾಗದಲ್ಲಿ ಕಾಡು ಪ್ರಾಣಿಗಳ ಬೇಟೆ ಕೂಡ ಇದ್ದು, ಬೇಟೆಗಾರರ ಇಲ್ಲವೇ ಮರಗಳ್ಳರ ಗುಂಡಿಗೆ ಹುಲಿ ಬಲಿಯಾಗಿರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ