ಕನ್ನಡಪ್ರಭ ವಾರ್ತೆ ಮಂಗಳೂರು ಉಳ್ಳಾಲ ನೇತ್ರಾವತಿ ಸೇತುವೆಯಿಂದ ಹಾರಿ ನಾಪತ್ತೆಯಾಗಿದ್ದ ತರಕಾರಿ ವ್ಯಾಪಾರಿ, ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲಫಾರ್ಮ್ ನಿವಾಸಿ ಪ್ರಸನ್ನ (37) ಅವರ ಮೃತದೇಹ ಪಣಂಬೂರು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಪ್ರಸನ್ನ ಅವರು ತರಕಾರಿ ವ್ಯಾಪಾರ ಮಾಡುತ್ತಿದ್ದು, ವ್ಯವಹಾರಕ್ಕೆ ಮಂಗಳೂರಿಗೆ ಬಂದು ಹೋಗುತ್ತಿದ್ದರು. ಅ.29ರಂದು ತನ್ನ ಸ್ನೇಹಿತ ನೂತನ್ ಎಂಬವರ ಜತೆ ಮಂಗಳೂರಿಗೆ ಬಂದಿದ್ದ ಅವರು ನಗರದ ಲಾಡ್ಜ್‌ನಲ್ಲಿ ರೂಮ್ ಪಡೆದಿದ್ದರು. ಬಳಿಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಸಂಬಂಧಿಕರನ್ನು ನೋಡಲು ಲಾಡ್ಜ್‌ನಿಂದ ತೆರಳಿದ್ದರು. ಆಸ್ಪತ್ರೆಗೆ ತೆರಳಿದ ಬಳಿಕ ನೂತನ್ ಅವರ ಬಳಿ ತಾನು ಹೊರಗೆ ಹೋಗಿ 15 ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ತೆರಳಿದ್ದರು. ಆದರೆ ತುಂಬಾ ಹೊತ್ತಿನ ಬಳಿಕವೂ ಮರಳಿ ಬಾರದೆ ನಾಪತ್ತೆಯಾಗಿದ್ದರು. ಈ ನಡುವೆ ಸೋಮವಾರ ಮಧ್ಯಾಹ್ನ ಪ್ರಸನ್ನ ಅವರ ಕಾರು ನೇತ್ರಾವತಿ ಸೇತುವೆ ಬಳಿ ನಿಂತಿರುವುದು ಹಾಗೂ ವ್ಯಕ್ತಿಯೊಬ್ಬರು ನೇತ್ರಾವತಿ ನದಿಗೆ ಹಾರಿರುವ ವಿಚಾರ ತಿಳಿದುಬಂದಿದೆ. ಮಂಗಳವಾರ ಮಧ್ಯಾಹ್ನ ವೇಳೆ ಪಣಂಬೂರಿನಲ್ಲಿ ಪ್ರಸನ್ನ ಅವರ ಮೃತದೇಹ ಪತ್ತೆಯಾಗಿದೆ. ಪ್ರಸನ್ನ ಅವರು ತರಕಾರಿ ವ್ಯಾಪಾರಿ ಮಾಡುತ್ತಿದ್ದು, ಹಲವು ಸಮಯದಿಂದ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.