ಕಬ್ಬು ದರ ಒಪ್ಪಂದಕ್ಕೆ ಕಾರ್ಖಾನೆಗಳಿಗೆ ನ.30ರವರೆಗೆ ಗಡುವು: ಜಿಲ್ಲಾಧಿಕಾರಿ

KannadaprabhaNewsNetwork |  
Published : Nov 10, 2024, 01:36 AM IST
ಫೋಟೋ- ಸುಗರ್‌ ಮೀಟ್‌ 1 ಮತ್ತು ಸುಗರ್‌ ಮೀಟ್‌ 2 | Kannada Prabha

ಸಾರಾಂಶ

ಪ್ರತಿ ಟನ್‍ ಕಬ್ಬಿಗೆ ನೀಡಲಾಗುವ ದರ, ಸಾಗಾಣಿಕೆ ವೆಚ್ಚದ ಕುರಿತು ಒಪ್ಪಂದ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಸೂಚನೆ. ಜಿಲ್ಲೆಯ 4 ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಕೂಡಲೆ ಪಾವತಿಸಬೇಕು. ಸೋಮವಾರದೊಳಗೆ ಬಾಕಿ ಪಾವತಿ ಸಂಬಂದ ಲಿಖಿತ ಹೇಳಿಕೆ ಸಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆಯಲಾದ ಕಬ್ಬು ಇದೀಗ ಕಟಾವಿಗೆ ಬಂದಿದ್ದು, ರೈತರಿಂದ ಕಬ್ಬು ಖರೀದಿ ಮುನ್ನ ಪ್ರತಿ ಟನ್‍ಗೆ ನೀಡಲಾಗುವ ದರ, ಸಾಗಾಣಿಕೆ ವೆಚ್ಚ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ನವೆಂಬರ್ 11 ರಿಂದ 30ರೊಳಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವಂತೆ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಗಡುವು ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಕಬ್ಬು ಬೆಳೆಗಾರರು ಮತ್ತು ರೈತ ಸಂಘದ ಮುಖಂಡರುಗಳ ಅಹವಾಲು ಆಲಿಸಿ ಮಾತನಾಡಿದ ಅವರು, ಎಲ್ಲಾ ರೈತರಿಂದ ಸಾಧ್ಯವಾಗದಿದ್ದರು ಕನಿಷ್ಠ ಪಕ್ಷ ಆಸಕ್ತ ರೈತರಿಂದ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡೆ ರೈತರಿಂದ ಕಬ್ಬು ಖರೀದಿ ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯ 4 ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಕೂಡಲೆ ಪಾವತಿಸಬೇಕು. ಸೋಮವಾರದೊಳಗೆ ಬಾಕಿ ಪಾವತಿ ಸಂಬಂದ ಲಿಖಿತ ಹೇಳಿಕೆ ಸಲ್ಲಿಸಬೇಕು. ಕಟಾವಿಗೆ ಟೋಕನ್ ನೀಡಿದ ಕೂಡಲೆ ಒಂದೆರಡು ದಿನದಲ್ಲಿ ಕಟಾವು ಮಾಡಿಕೊಂಡು ಹೋಗಬೇಕು. ಕಟಾವಿನ ಸಂದರ್ಭದಲ್ಲಿ ಸಣ್ಣ-ದೊಡ್ಡ ರೈತ ಎಂದು ತಾರತಮ್ಯ ಮಾಡದೆ ಕಟಾವು ಮಾಡಬೇಕು. ಕಬ್ಬು ಕಾರ್ಖಾನೆಗೆ ತಂದು ಕೂಡಲೆ ತೂಕ ಮಾಡಿದ ನಂತರವೇ ಕಾರ್ಖಾನೆಯೊಳಗೆ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕು ತೂಕದಲ್ಲಿ ರೈತರಿಗೆ ಮೋಸ ಮಾಡಬಾರದೆಂದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಕಬ್ಬಿನ ಹಣ 15 ದಿನದಲ್ಲಿಯೇ ರೈತರಿಗೆ ಪಾವತಿಸುವಂತೆ ಸೂಚಿಸಿದರು.

ಕಬ್ಬು ತೂಕದಲ್ಲಿ ಕಾರ್ಖಾನೆಯಿಂದ ಮೋಸವಾಗುತ್ತಿದೆ ಎಂಬ ರೈತ ಮುಖಂಡರ ಅಭಿಪ್ರಾಯದ ಹಿನ್ನೆಲೆಯಲ್ಲಿ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು ಆಗಾಗ ಸಕ್ಕರೆ ಕಾರ್ಖಾನೆಗಳಿಗೆ ಹಠಾತ್ ಭೇಟಿ ನೀಡಿ ತಪಾಸಣೆ ಮಾಡಬೇಕು. ಆಹಾರ ಇಲಾಕೆ ಅಧಿಕಾರಿಗಳು ಇಳುವರಿ ಕುರಿತು ಕಾರ್ಖಾನೆವಾರು ಪ್ರತಿ ದಿನ ನಿರ್ವಹಣೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ ಇರುವ 4 ಕಾರ್ಖಾನೆಗಳ ಜೊತೆಗೆ ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್, ಹಂದನೂರ ಮತು ಕಲಬುರಗಿ ತಾಲೂಕಿನ ಹೊಳಕುಂದಾ, ಮಹಾಗಾಂವ ಬಳಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಈಗಾಗಲೆ ಜಿಲ್ಲೆಯಿಂದ ಕಬ್ಬು ಆಯುಕ್ತರಿಗೆ ಕಳುಹಿಸಲಾಗಿದೆ. ಮುಂದಿನ ದಿನದಲ್ಲಿ ಈ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾದಲ್ಲಿ ವ್ಯಾಪರ ಸ್ಪರ್ಧೆ ಏರ್ಪಟ್ಟು ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಡಿ.ಸಿ. ಅವರು ತಿಳಿಸಿದರು.

ಶೆಲ್ಟರ್, ಕ್ಯಾಂಟೀನ್ ಸ್ಥಾಪಿಸಿ:

ಸಭೆಯಲ್ಲಿ ರೈತ ಮುಖಂಡ ಮೌಲಾಮುಲ್ಲಾ ಮಾತನಾಡಿ, ಕೆಲವೊಮ್ಮೆ ರೈತ ತನ್ನ ಮಡದಿ, ಮಕ್ಕಳೊಂದಿಗೆ ಕಬ್ಬು ಕಟಾವು ಮಾಡಿಕೊಂಡು ಕಾರ್ಖಾನೆಗೆ ತೆಗೆದುಕೊಂಡು ಹೋಗಿದ್ದಾಗ ಅಲ್ಲಿಯೆ ರಾತ್ರಿ ಕಳೆಯಬೇಕಾಗುತ್ತದೆ. ಹೀಗಾಗಿ ರಾತ್ರಿ ಕಳೆಯಲು ಸೂಕ್ತ ಶೆಡ್, ಕಾರ್ಖಾನೆ ಸಮೀಪ ಲಘು ಉಪಹಾರಕ್ಕಾಗಿ ಕ್ಯಾಂಟಿನ್ ತೆರೆಯಬೇಕೆಂದು ಮನವಿ ಮಾಡಿದರು. ಇದಕ್ಕೆ ಡಿ.ಸಿ. ಸಮ್ಮತ್ತಿಸಿ ಕೂಡಲೆ ಕಾರ್ಖಾನೆಯವರು ಶೆಲ್ಟರ್, ಕ್ಯಾಂಟೀನ್ ಸ್ಥಾಪಿಸುವಂತೆ ಸೂಚಿಸಿದರು.

ಕಾನೂನು ಕ್ರಮದ ಎಚ್ಚರಿಕೆ:

ಹಳೇ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದ ಅವರು, ಸೋಮವಾರ ಆಯಾ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರು, ಮಾಲೀಕರೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ಆಯೋಜಿಸಿ ಎಂದು ಆಹಾರ ಇಲಾಖೆ ಉಪನಿರ್ದೇಶಕ ಭೀಮರಾವ ಅವರಿಗೆ ನಿರ್ದೇಶನ ನೀಡಿದರು.

ಹಣ ಪಾವತಿ ಮತ್ತು ಬಾಕಿ ಕುರಿತು ಎಸ್.ಎಂ.ಎಸ್ ಕಳುಹಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಡಿ.ಸಿ. ಮತ್ತು ಕಾರ್ಖಾನೆ ಪ್ರತಿನಿಧಿಗಳ ಮಂದೆ ರೈತ ಮುಖಂಡರು ಬೇಡಿಕೆ ಇಟ್ಟರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಆಹಾರ ಇಲಾಖೆ ಉಪನಿರ್ದೇಶಕ ಭೀಮರಾವ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಆಳಂದ ತಹಸೀಲ್ದಾರ್‌ ಅಣ್ಣಾರಾವ ಪಾಟೀಲ, ಅಫಜಲಪೂರ ತಹಸೀಲ್ದಾರ್‌ ಸಂಜೀವಕುಮಾರ ದಾಸರ್, ಯಡ್ರಾಮಿ ತಹಸೀಲ್ದಾರ್‌ ಶಶಿಕಲಾ ಪಾದಗಟ್ಟಿ, ದಿ. ಉಗಾರ್ ಶುಗರ್ ವಕ್ಸ್ ಲಿ. ಕಾರ್ಖಾನೆಯ ಮಾಣಿಕರಾವ ಗಡಾದೆ, ಕೆ.ಪಿ.ಆರ್ ಶುಗರ್ಸ್ & ಅಪ್ಪಾರೆಲ್ಸ್ ಲಿ. ಕಾರ್ಖಾನೆಯ ಎ.ರಾಜಶೇಖರ್, ಶ್ರೀ ರೇಣುಕಾ ಶುಗರ್ಸ್ ಲಿ. ಕಾರ್ಖಾನೆಯ ಚಿದಾನಂದ ಸ್ವಾಮಿ, ಎನ್.ಎಸ್.ಎಲ್. ಶುಗರ್ಸ್ ಕಾರ್ಖಾನೆಯ ಜಿ.ಭಾಸ್ಕರ್ ನಾಯಕ್ ಮತ್ತು ಎಂ.ಜಿ.ಅಂಬಿ ಸೇರಿದಂತೆ ಅನೇಕ ರೈತ ಮುಖಂಡರು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ