ಅದ್ಧೂರಿ ಬಸವ ಜಯಂತಿ ಆಚರಣೆಗೆ ತೀರ್ಮಾನ

KannadaprabhaNewsNetwork | Published : Apr 12, 2025 12:48 AM

ಸಾರಾಂಶ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅಧ್ಯಕ್ಷತೆಯಲ್ಲಿ ಹಾಗೂ ಕಾಡಾ ಅಧ್ಯಕ್ಷ ಮರಿಸ್ವಾಮಿ ಮತ್ತು ಇನ್ನಿತರ ಮುಖಂಡರ ಸಮ್ಮುಖದಲ್ಲಿ ಬಸವ ಜಯಂತಿ ಆಚರಣೆ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರದೊಂದಿಗೆ ಬಸವ ಜಯಂತಿ ಆಚರಣೆ ಕಾರ್ಯಕ್ರಮವನ್ನು ಇದೇ ಏ.30ರಂದು ಅದ್ಧೂರಿಯಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅಧ್ಯಕ್ಷತೆಯಲ್ಲಿ ಹಾಗೂ ಕಾಡಾ ಅಧ್ಯಕ್ಷ ಮರಿಸ್ವಾಮಿ ಮತ್ತು ಇನ್ನಿತರ ಮುಖಂಡರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಹಾಜರಿದ್ದ ಮುಖಂಡರು ಮಾತನಾಡಿ, ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಬಸವಣ್ಣನವರ ಪ್ರತಿಮೆ ಉದ್ಘಾಟನೆಯು ಬಸವ ಜಯಂತಿಯಂದೇ ಆಗಬೇಕು. ಅಲ್ಲಿಂದಲೇ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಆರಂಭಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಸಿ ಕಾರ್ಯಕ್ರಮ ನಡೆಯುವ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಮುಕ್ತಾಯವಾಗಬೇಕು ಎಂದರು. ಗ್ರಾಮ ಪಂಚಾಯಿತಿಗಳಲ್ಲಿ, ಶಾಲೆಗಳಲ್ಲಿ ಬಸವ ಜಯಂತಿ ಆಚರಣೆಯಾಗಬೇಕು. ವಚನ ಸಾಹಿತ್ಯದ ಪುಸ್ತಕ ಮಳಿಗೆ ತೆರೆಯಬೇಕು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವು ವೇದಿಕೆ ಕಾರ್ಯಕ್ರಮದಲ್ಲಿ ಇರಬೇಕು. ಬಸವಣ್ಣನವರು ರಚಿಸಿದ ವಚನ ಸಂಬಂಧ ಕೃತಿಗಳು ಹಂಚಿಕೆಯಾಗಬೇಕು. ಮೆರವಣಿಗೆಗೆ ಹೆಚ್ಚು ಕಲಾ ತಂಡಗಳನ್ನು ನಿಯೋಜಿಸಬೇಕು ಎಂಬುದೂ ಸೇರಿದಂತೆ ಇನ್ನಿತರ ಸಲಹೆಗಳನ್ನು ಮುಖಂಡರು ನೀಡಿದರು.

ಇದೇ ವೇಳೆ ಹಲವು ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದಾರೆ. ಇಂತಹವರ ವಿರುದ್ದ ಕ್ರಮ ವಹಿಸಬೇಕು. ಬಸವ ಜಯಂತಿಯಂದು ಅಧಿಕಾರಿಗಳು ಸಿಬ್ಬಂದಿ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚನೆ ನೀಡಬೇಕು ಎಂದು ಮುಖಂಡರು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ಬಸವ ಜಯಂತಿಯಂದು ಬಸವೇಶ್ವರರ ಪ್ರತಿಮೆ ಉದ್ಘಾಟನೆ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗುವುದು. ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಲಾಗುವುದು ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರನ್ನು ಆಹ್ವಾನಿಸಬೇಕಿದೆ. ಈ ನಿಟ್ಟಿನಲ್ಲಿ ಮುಖಂಡರು ನೀಡುವ ಸಲಹೆಗಳನ್ನು ಪರಿಗಣಿಸಿ ಭಾಷಣಕಾರರನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮ ಸಂಬಂಧ ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು. ಬಸವ ಜಯಂತಿ ಆಚರಣೆ ಯಶಸ್ವಿಗೆ ಎಲ್ಲರು ಸಹಕರಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಕೋರಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ಮುಖಂಡರಾದ ಮೂಡ್ಲುಪುರ ನಂದೀಶ್, ಬಿ.ಕೆ. ರವಿಕುಮಾರ್, ಆಲೂರು ಮಲ್ಲು, ಕೆ. ವೀರಭದ್ರಸ್ವಾಮಿ, ಶಿವರುದ್ರ, ಕಾಳನಹುಂಡಿ ಗುರುಸ್ವಾಮಿ, ಶಿವಪ್ರಸಾದ್, ಸುರೇಶ್ ವಾಜಪೇಯಿ, ಚಾ.ರಂ. ಶ್ರೀನಿವಾಸಗೌಡ, ರತ್ನಮ್ಮ, ಜಿ. ಬಂಗಾರು, ಸಿ.ಎಂ. ನರಸಿಂಹಮೂರ್ತಿ, ಶಿವಣ್ಣ, ಬ್ಯಾಡಮೂಡ್ಲು ಬಸವಣ್ಣ, ಇತರೆ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Share this article