ಏಕಬಳಕೆ ಪ್ಲಾಸ್ಟಿಕ್ ಮತ್ತು ಒಂದು ಲೀಟರ್ ವರೆಗಿನ ಕುಡಿಯುವ ನೀರಿನ ಬಾಟಲಿಗಳನ್ನು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ನಿಷೇಧ ಮಾಡುವ ಕುರಿತು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿರ್ಧಾರ ಕೈಗೊಂಡಿದೆ.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಏಕಬಳಕೆ ಪ್ಲಾಸ್ಟಿಕ್ ಮತ್ತು ಒಂದು ಲೀಟರ್ ವರೆಗಿನ ಕುಡಿಯುವ ನೀರಿನ ಬಾಟಲಿಗಳನ್ನು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ನಿಷೇಧ ಮಾಡುವ ಕುರಿತು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿರ್ಧಾರ ಕೈಗೊಂಡಿದೆ.ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಭವನದಲ್ಲಿ ಜಿಲ್ಲಾ ಚೇಂಬರ್ ನ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ತ್ರೈಮಾಸಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ಏಕಬಳಕೆ ಪ್ಲಾಸ್ಟಿಕ್ ಮತ್ತು ಒಂದು ಲೀಟರ್ ವರೆಗಿನ ಕುಡಿಯುವ ನೀರಿನ ಬಾಟಲಿಗಳಿಂದ ಪರಿಸರದ ಮೇಲಾಗುತ್ತಿರುವ ಹಾನಿಯ ಕುರಿತು ಚರ್ಚಿಸಲಾಯಿತು. ಮಡಿಕೇರಿ ನಗರದಲ್ಲಿ ಮಾತ್ರ ಒಂದು ಲೀಟರ್ ವರೆಗಿನ ಕುಡಿಯುವ ನೀರಿನ ಬಾಟಲಿ ಬಳಕೆ ನಿಷೇಧ ಮಾಡಲಾಗಿದೆ. ಇದನ್ನು ಜಿಲ್ಲಾವ್ಯಾಪಿ ವಿಸ್ತರಿಸಬೇಕು ಮತ್ತು ಏಕಬಳಕೆ ಪ್ಲಾಸ್ಟಿಕ್ ಕಡ್ಡಾಯವಾಗಿ ನಿಷೇಧಿಸಬೇಕು ಎಂದು ನಿರ್ಧರಿಸಲಾಯಿತು.ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ಸ್ಥಳೀಯ ಮತ್ತು ಜಿಲ್ಲಾ ಸಂಸ್ಥೆಗಳಲ್ಲಿ ಯುವ ಸದಸ್ಯರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು. ಸ್ಥಾನೀಯ ಸಂಸ್ಥೆಗಳನ್ನು ಹೆಚ್ಚು ಬಲಗೊಳಿಸಬೇಕು ಮತ್ತು ಹೊಸ ಸದಸ್ಯರ ನೋಂದಣಿ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದರು.ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಕಳೆದ ಸಭೆಯ ವರದಿ ವಾಚಿಸಿದರು, ಖಜಾಂಚಿ ಪಿ.ಎಸ್.ಸುರೇಶ್ ಲೆಕ್ಕಪತ್ರ ಮಂಡಿಸಿದರು. ಸ್ಥಾನೀಯ ಸಂಸ್ಥೆಯ ಅಧ್ಯಕ್ಷರುಗಳು ಹಾಗೂ ಪ್ರತಿನಿಧಿಗಳು ಈವರೆಗಿನ ಕಾರ್ಯ ಚಟುವಟಿಕೆಗಳ ವಿವರ ನೀಡಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಗೋಣಿಕೊಪ್ಪ ಸ್ಥಳೀಯ ಸಂಸ್ಥೆಯನ್ನು ಉತ್ತಮವಾಗಿ ಸಂಘಟಿಸಿದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಹಾಗೂ ಜಿಲ್ಲಾ ಚೇಂಬರ್ ನ ಉಪಾಧ್ಯಕ್ಷ ಸುನಿಲ್ ಮಾದಪ್ಪ ಅವರನ್ನು ಜಿಲ್ಲಾ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಹಿರಿಯ ವರ್ತಕರಾದ ಬಾಬುಚಂದ್ರ ಉಳ್ಳಾಗಡ್ಡಿ, ಪಿ.ಕೆ.ವಿಜಯನ್ ಹಾಗೂ ವಿ.ಮನೋಹರ್‌ಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.ಉಪಾಧ್ಯಕ್ಷರಾದ ನವೀನ್ ಅಂಬೆಕಲ್, ಬಿ.ಟಿ.ತಿಮ್ಮಶೆಟ್ಟಿ, ಮಾಜಿ ಅಧ್ಯಕ್ಷರಾದ ಗಿರೀಶ್ ಗಣಪತಿ, ಬಿ.ಎನ್.ಪ್ರಕಾಶ್, ಸಂಘಟನಾ ಕಾರ್ಯದರ್ಶಿಗಳಾದ ಟಿ.ಆರ್.ಶರವಣ ಕುಮಾರ್, ಬಿ.ಆರ್.ಪ್ರಮೋದ್ ಮತ್ತಿತರರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.