ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಸೌಧದಲ್ಲಿ ಶುಕ್ರವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ಸಫಾರಿ ಪುನರಾರಂಭ ಕುರಿತು ಚರ್ಚೆ ನಡೆಸಲಾಯಿತು. ಅಂತಿಮವಾಗಿ ಸಫಾರಿ ಮತ್ತೆ ಆರಂಭಿಸಲು ಇರುವ ಸಾಧಕ-ಬಾಧಕ ಅಧ್ಯಯನ ನಡೆಸಿ ವರದಿ ನೀಡುವ ಸಂಬಂಧ ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬಂಡೀಪುರ ಮತ್ತು ನಾಗರಹೊಳೆ ಭಾಗದಲ್ಲಿ ಹುಲಿಗಳ ದಾಳಿಯಿಂದ ಮೂವರು ಮೃತಪಟ್ಟಿದ್ದರು. ಆ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅದಾದ ನಂತರದ 2 ತಿಂಗಳಲ್ಲಿ ಹುಲಿಗಳ ದಾಳಿ ನಡೆದಿಲ್ಲ. ಸಫಾರಿ ವಾಹನಗಳಿಂದಾಗುವ ಕಿರಿಕಿರಿ, ವಾಹನಗಳ ಬೆಳಕಿನಿಂದ ವನ್ಯಜೀವಿಗಳು ಅರಣ್ಯದಿಂದ ಹೊರಬರುತ್ತಿರುವ ಆರೋಪವಿದೆ. ಈ ಬಗ್ಗೆ ಅಧ್ಯಯನ ನಡೆಯಬೇಕು ಎಂದರು.1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿ ಇತ್ತು. ಪ್ರಸ್ತುತ ಸುಮಾರು 175ರಿಂದ 200 ಹುಲಿಗಳಿವೆ. ಒಂದು ಹುಲಿ ಸ್ವಚ್ಛಂದವಾಗಿ ಜೀವಿಸಲು 10 ಚದರ ಕಿ.ಮೀ.ಪ್ರದೇಶದ ಅವಶ್ಯಕತೆಯಿದೆ ಎಂದು ತಜ್ಞರು ತಿಳಿಸುತ್ತಾರೆ. ಆದರೆ, 900 ಚದರ ಕಿ.ಮೀ. ವಿಸ್ತೀರ್ಣದ ಕಾಡಿನಲ್ಲಿ 200 ಹುಲಿಗಳು ಇರಲು ಸಾಧ್ಯವಿಲ್ಲ. ಹೀಗಾಗಿ ಹುಲಿಗಳು ನಾಡಿನತ್ತ ಬರುತ್ತಿವೆ ಎಂಬ ಅಭಿಪ್ರಾಯವೂಯಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.ಅರಣ್ಯ ಮತ್ತು ವನ್ಯಜೀವಿ ರಾಯಭಾರಿ ಅನಿಲ್ ಕುಂಬ್ಳೆ ಮಾತನಾಡಿ, ವನ್ಯಜೀವಿಗಳು ಕಾಡಿನಿಂದ ಹೊರ ಬರಲು ಸಫಾರಿ ಕಾರಣವಲ್ಲ. ಸಫಾರಿಗೆ ಶೇ.8ರಷ್ಟು ಅರಣ್ಯ ಪ್ರದೇಶವೂ ಬಳಕೆಯಾಗುವುದಿಲ್ಲ. ಸಫಾರಿಯಿಂದ ಸ್ಥಳೀಯರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಲಿದೆ. ಹೀಗಾಗಿ ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದರು.
ಅದಕ್ಕೆ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಸಿ. ರೇ ಧ್ವನಿಗೂಡಿಸಿ, ಹಂತಹಂತವಾಗಿ ಸಫಾರಿ ಆರಂಭಿಸುವುದು ಸೂಕ್ತ ಎಂದು ಸಲಹೆ ನೀಡಿದರು.ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರು, ಸಫಾರಿಯನ್ನು ಹಂತಹಂತವಾಗಿ ಆರಂಭಿಸಲು ಮತ್ತು ಸಫಾರಿ ವಾಹನಗಳ ಧಾರಣಾ ಶಕ್ತಿ, ಹುಲಿಗಳು ನಾಡಿಗೆ ಬರಲು ಕಾರಣದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ರಚಿಸುವಂತೆ ನಿರ್ದೇಶಿಸಿದರು.