ಪಶ್ಚಿಮ ಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿ ಆಯೋಜನೆ । ವಿವಿಧ ಸಂಘಟನೆ ಭಾಗಿ । ಕಾಫಿ ಎಸ್ಟೇಟಲ್ಲಿ ಶಾಶ್ವತ ನಿಷೇಧಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬೆಟ್ಟದ ರೋಡಿಕ್ ಕಾಫಿ ಎಸ್ಟೇಟ್‌ನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ತಾಲೂಕು ಹಾಗೂ ಕೊಡಗು ಗಡಿಭಾಗವನ್ನು ಹೊಂದಿಕೊಂಡಿರುವ ಹೊಸೂರ ಸುತ್ತಮುತ್ತಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿಯಿಂದ ಜೂ.8ಕ್ಕೆ ಪಕ್ಷಾತೀತವಾಗಿ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.ಕೊಡಗಿನ ಜೊತೆ ಗಡಿಭಾಗವನ್ನು ಹಂಚಿಕೊಂಡಿರುವ ತಾಲೂಕಿನ ಯಸಳೂರು ಹೋಬಳಿ ವ್ಯಾಪ್ತಿಗೆ ಸೇರುವ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಕೋಟೆ ಬೆಟ್ಟದಲ್ಲಿರುವ ರೋಡಿಕ್ ಕಾಫಿ ಎಸ್ಟೇಟ್ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿದೆ. ಈ ಪ್ರದೇಶವು ಸಮುದ್ರಮಟ್ಟಕ್ಕೆ ಸುಮಾರು ೪೫೦೦ ಅಡಿಗಳ ಎತ್ತರದಲ್ಲಿದ್ದು ಬೆಟ್ಟಗುಡ್ಡಗಳು, ಮರಗಿಡಗಳಿಂದ ಕೂಡಿದೆ. ಈ ಬೆಟ್ಟಗುಡ್ಡಗಳು ಹಾಗೂ ಮರ ಗಿಡಗಳು ಮಳೆ ಮಾರುತಗಳನ್ನು ತಡೆದು ಸುಮಾರು ೧೨೦ರಿಂದ ೨೫೦ ಇಂಚುಗಳ ತನಕ ಮಳೆ ಸುರಿಸುತ್ತವೆ.
ಲೋಕಸಭಾ ಚುನಾವಣೆಯ ಮೊದಲು ಗಣಿಗಾರಿಕೆಯನ್ನು ನಿಷೇಧ ಮಾಡದಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಶೃತಿ, ತಹಸೀಲ್ದಾರ್ ಮೇಘನಾ ಆಗಮಿಸಿ ಗಣಿಗಾರಿಕೆಯನ್ನು ನಿಲ್ಲಿಸುವ ಭರವಸೆ ನೀಡಿದ್ದರು. ಇದೀಗ ಪುನ: ಕಲ್ಲು ಗಣಿಗಾರಿಕೆ ಆರಂಭವಾಗಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.
ಹೊಸಕೋಟೆ ಬೆಟ್ಟದಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಈಗಾಗಲೆ ಕರ್ನಾಟಕ ಬೆಳೆಗಾರರ ಒಕ್ಕೂಟವು ಖಂಡಿಸಿದ್ದು ಹೊಸೂರು, ಚಂಗಡಿಹಳ್ಳಿ, ಉಚ್ಚಂಗಿ, ವನಗೂರು, ಯಸಳೂರು ಹಾಗೂ ಕೊಡಗಿನ ತೋಳೂರು, ಶೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರ ನೇತೃತ್ವದಲ್ಲಿ ಪಶ್ಚಿಮ ಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿ ರೋಡಿಕ್ ಕಾಫಿ ಎಸ್ಟೇಟ್‌ನಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸುವಂತೆ ಜೂ.೮ ರಂದು ಹೊಸೂರಿನ ಬಸವೇಶ್ವರ ವೃತ್ತದಲ್ಲಿ ಬೆಳಿಗ್ಗೆ ೧೦ಗಂಟೆಗೆ ಬೃಹತ್ ಪ್ರತಿಭಟನೆ ಆಯೋಜಿಸಿದೆ.
೨೦೦೨ ಇಸವಿಯಲ್ಲೆ ಅರಣ್ಯ ಪರಿಸರ, ಭೂವಿಜ್ಞಾನ ಗಣಿಗಾರಿಕೆ ಅಧಿಕಾರಿಗಳು ಈ ಭಾಗದಲ್ಲಿ ಶಾಶ್ವತವಾಗಿ ಗಣಿಗಾರಿಕೆಯನ್ನು ನಿಷೇಧಿಸಿದ್ದರು. ಆದರೆ ಕೆಲವು ಕಾಣದ ಕೈಗಳು ಇಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದು ಖಂಡನೀಯ, ಪಶ್ಚಿಮ ಘಟ್ಟದ ಉಳಿವಿಗಾಗಿ ಕೂಡಲೇ ಗಣಿಗಾರಿಕೆಯನ್ನು ನಿಲ್ಲಿಸಬೇಕು.
ಗಣಿಗಾರಿಕೆಯನ್ನು ನಿಲ್ಲಿಸುವಂತೆ ಗ್ರಾಮಸ್ಥರು ಮಾಡುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ. ಪಶ್ಚಿಮ ಘಟ್ಟದ ಉಳಿವಿಗಾಗಿ ಅಧಿಕಾರಿಗಳು ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು. ಈ ಭಾಗದಲ್ಲಿ ಶಾಶ್ವತವಾಗಿ ಗಣಿಗಾರಿಕೆಯನ್ನು ನಿಷೇಧಿಸಬೇಕು.