ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಮನಗೂಳಿ ಪಟ್ಟಣದ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ ಅವರ ನಿವಾಸದಲ್ಲಿ ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಅತಿ ಮಳೆಯಿಂದಾಗಿ ಅತಿವೃಷ್ಟಿಯಾಗಿತ್ತು. ಈ ವರ್ಷ ಮಳೆಯ ಅಭಾವದಿಂದ ಅನಾವೃಷ್ಟಿಯಾಗಿದೆ. ರಾಜ್ಯದಲ್ಲಿ ಕಳೆದ ವರ್ಷವೂ ರಾಜ್ಯದ ಕೃಷಿ ಮಂತ್ರಿ ಭೇಟಿ ನೀಡಿರಲಿಲ್ಲ. ಈ ವರ್ಷ ಅನಾವೃಷ್ಟಿಯಾಗಿದೆ. ಇದೀಗ ಸಂಪುಟದಲ್ಲಿ ಕೃಷಿ ಮಂತ್ರಿಯೇ ಇಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ರೈತರ ಕುರಿತು ಕಿಂಚಿತ್ತು ಕಾಳಜಿಯೇ ಇಲ್ಲ ಎಂದು ದೂರಿದರು.ಕೂಡಲೇ ಸರ್ಕಾರ ಬರಗಾಲವೆಂದು ಘೋಷಣೆ ಮಾಡಿ ರೈತರ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರಧನ ನೀಡಬೇಕು. ಪ್ರತಿ ತಾಲೂಕಿಗೆ ಕುಡಿಯುವ ನೀರಿಗೆ ₹5 ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ರೈತರಿಂದ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡುವವರು ಸಂಕಷ್ಟದಲ್ಲಿದ್ದಾರೆ. ಇವರಿಗೂ ಸರ್ಕಾರ ಸ್ಪಂದಿಸಬೇಕಿದೆ. ಈಗಾಗಲೇ ಕೆಲ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಸರ್ಕಾರ ಎಲ್ಲ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಬೇಕು. ಬರಗಾಲದ ಅಗತ್ಯ ಕ್ರಮಗಳಾದ ಗೋಶಾಲೆ, ಮೇವು ಬ್ಯಾಂಕ್ ತೆರೆಯುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಬರ ಅಧ್ಯಯನವನ್ನು ವಿಜಯಪುರ ಜಿಲ್ಲೆಯಿಂದ ಆರಂಭಿಸಿದ್ದು. ಇಂಡಿ, ಬಸವನಬಾಗೇವಾಡಿ ತಾಲೂಕಿನಲ್ಲಿ ಸಂಚರಿಸಿ ರೈತರ ಸಮಸ್ಯೆ ಆಲಿಸಿದೆ. ಈ ಭಾಗದಲ್ಲಿ ಮಳೆಯಾಗಿದ್ದರೆ ಈಗಾಗಲೇ ತೊಗರಿ, ಮೆಕ್ಕೆಜೋಳ, ಹತ್ತಿ ಬಿತ್ತನೆಯಾಗಿರುತ್ತಿತ್ತು. ಜುಲೈ ತಿಂಗಳು ಬಂದರೂ ಬಿತ್ತನೆಯಾಗಿಲ್ಲ. ಜಿಲ್ಲೆಯಲ್ಲಿ 116 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಐದೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಲ್ಲಿ ಒಂದೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆ ಮಾಡಿದ ರೈತರು ಮಳೆಯಿಲ್ಲದೇ ಬೆಳೆ ನಾಶವಾಗುತ್ತಿವೆ. ತಮಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ರೈತರು ಮನವಿ ಮಾಡಿದ್ದಾಗಿ ಹೇಳಿದರು.ಸಿಎಂ ಡಿ.ಕೆ.ಶಿವಕುಮಾರ ಅವರು ರಾಜ್ಯದ ಜಲಾಶಯದಲ್ಲಿ ನೀರಿಲ್ಲ. ಯಾರೂ ಬಿತ್ತನೆ ಮಾಡಬಾರದು ಎಂಬ ಲಘು ಹೇಳಿಕೆ ನೀಡಿರುವುದನ್ನು ನಾವು ನೋಡಿಯೇ ಇಲ್ಲ. ನಾವು ಕಾಟಾಚಾರಕ್ಕೆ ಬರ ಅಧ್ಯಯನ ಮಾಡಲು ಬಂದಿಲ್ಲ. ಇಲ್ಲಿನ ನೈಜ ಪರಿಸ್ಥಿತಿ, ರೈತರ ಸಂಕಷ್ಟಗಳನ್ನು ಅರಿಯಲು ಬಂದಿದ್ದು. ಅದರ ಕುರಿತು ಅಧ್ಯಯನ ವರದಿ ಸಲ್ಲಿಸಲಾಗುವದು ಎಂದರು.
-----------
ರೈತ ಸಾಲ ಮನ್ನಾಗೆ ನಿಖಿಲ್ ಆಗ್ರಹ
------
ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂಬರುವ ಜಿಪಂ,ತಾಪಂ ಚುನಾವಣೆಯಲ್ಲಿಯೂ ಇರುತ್ತದೆ. ಇದರ ಬಗ್ಗೆ ಯಾವುದೇ ಸಂದೇಹ ಬೇಡ, ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುವ ಸದುದ್ದೇಶದಿಂದ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಮುಂಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಬೇಕಾದ ಕಾರ್ಯಯೋಜನೆಗಳನ್ನು ಹಾಕಿ ಒಟ್ಟಾಗಿ ಹೋರಾಟ ಮಾಡಲಾಗುತ್ತದೆ.