ಬೆಂಗಳೂರು : ನಗರದಲ್ಲಿ ಪಾದಚಾರಿ ಒತ್ತುವರಿ ಕಾರ್ಯಾಚರಣೆ ಮುಂದುವರಿದಿದ್ದು, 15ನೇ ದಿನವೂ ಮೂರು ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದೆ.
ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಬ್ಯಾಟರಾಯನಪುರ ವಿಭಾಗದ ಕೋಗಿಲು ಮುಖ್ಯರಸ್ತೆಯಲ್ಲಿ ಇಟ್ಟಿಗೆ ಫ್ಯಾಕ್ಟರಿಯಿಂದ ಬೆಳ್ಳಹಳ್ಳಿ ಜಂಕ್ಷನ್‌ವರೆಗೆ ಸುಮಾರು 1.20 ಕಿ.ಮೀ. ಹಾಗೂ ಅಗ್ರಹಾರ ಲೇಔಟ್ ಮುಖ್ಯರಸ್ತೆಯಲ್ಲಿ ಅಗ್ರಹಾರ ಗ್ರಾಮ ಜಂಕ್ಷನ್‌ನಿಂದ ಬಿಬಿಎಂಪಿ ಕಚೇರಿವರೆಗೆ 1.00 ಕಿ.ಮೀ ರಸ್ತೆ ತೆರವುಗೊಳಿಸಲಾಯಿತು.
ಪುಲಕೇಶಿನಗರ ವಿಭಾಗದಲ್ಲಿ ಪ್ರೊಮೆನೇಡ್ ರಸ್ತೆಯಲ್ಲಿ ಹೈನ್ಸ್ ರಸ್ತೆಯಿಂದ ಸೇಂಟ್ ಜಾನ್ಸ್ ಚರ್ಚ್ ರಸ್ತೆಯವರೆಗೆ ಸುಮಾರು 1.35 ಕಿ.ಮೀ. ದಾಸರಹಳ್ಳಿ ವಿಭಾಗದಲ್ಲಿ ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಸುಮಾರು 2.00 ಕಿ.ಮೀ.ಸೇರಿದಂತೆ ಒಟ್ಟು 5.55 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ಸುಗಮಗೊಳಿಸಲಾಗಿದೆ. ಕಾರ್ಯಾಚರಣೆಯಲ್ಲಿ 11 ಅಂಗಡಿಗಳು, ಪೆಟ್ಟಿ ಅಂಗಡಿಗಳ ತೆರವು, 25 ತಳ್ಳುವ ಗಾಡಿಗಳ ತೆರವು, 10 ಶೀಟ್, ಮೇಲ್ಛಾವಣಿ, 18 ಮೆಟ್ಟಿಲುಗಳು ಹಾಗೂ ರ‍್ಯಾಂಪುಗಳ ತೆರವು, 19 ಜಾಹೀರಾತು ಫಲಕಗಳ ತೆರವು, 35 ಟನ್ ತ್ಯಾಜ್ಯ, ಮಣ್ಣು ತೆರವುಗೊಳಿಸಲಾಯಿತು. 3 ಜೆಸಿಬಿಗಳು, 5 ಟ್ರಾಕ್ಟರ್‌ಗಳು, 2 ಟಿಪ್ಪರ್‌ಗಳು, 1 ಇತರೆ ಯಂತ್ರ, 46 ಸಿಬ್ಬಂದಿ ಮತ್ತು ಕಾರ್ಮಿಕರು ಪಾಲ್ಗೊಂಡಿದ್ದರು.
ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತ ಜಗದೀಶ್ ಪಿ ಮಾರ್ಗದರ್ಶನದಲ್ಲಿ ಶಿವಾಜಿನಗರ ಸುಲ್ತಾನ್ ರಸ್ತೆಯ ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳು ಪಾದಚಾರಿ ರಸ್ತೆಗೆ ಕ್ಯಾಂಟೀನ್ ವಿಸ್ತರಣೆ ಮಾಡಿದ್ದ ಕಬ್ಬಿಣಗಳ ತಡೆಯನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.ಬುಧವಾರ 7 ಪ್ರಮುಖ ರಸ್ತೆಗಳ 7.10 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಲಾಗಿದೆ. ಪಾಲಿಕೆಗೆ ಸಾರ್ವಜನಿಕರಿಂದ ಬಂದಿದ್ದ ದೂರುಗಳು ಹಾಗೂ ಪಾದಚಾರಿಗಳು ಮತ್ತು ವಾಹನಗಳ ಸಂಚಾರಕ್ಕೆ ಉಂಟಾಗುತ್ತಿದ್ದ ತೊಂದರೆ ಗಮನದಲ್ಲಿಟ್ಟುಕೊಂಡು, ಪಾಲಿಕೆಯ ಶಾಂತಿನಗರ, ಸಿ.ವಿ.ರಾಮನ್ ನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ ಹಾಗೂ ಶಿವಾಜಿನಗರ ವಿಭಾಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಸರ್.ಸಿ.ವಿ.ರಾಮನ್ ನಗರ ವಿಭಾಗದಲ್ಲಿ 1.3 ಕಿ.ಮೀ ರಸ್ತೆ, ಶಾಂತಿನಗರ ವಿಭಾಗ, ಗಾಂಧಿನಗರ ವಿಭಾಗದಲ್ಲಿ, ಗುಬ್ಬಿತೋಟದಪ್ಪ ರಸ್ತೆಯ 1.50 ಕಿ.ಮೀ ರಸ್ತೆ, ಶಿವಾಜಿನಗರ ವಿಭಾಗದಲ್ಲಿ ಕಾಕ್ ಬರ್ನ್ ರಸ್ತೆ ಬಂಬೂ ಬಸಾರ್ - ಹಫೀಸ ಶಾಲೆ ಪ್ರದೇಶದಲ್ಲಿ 0.50 ಕಿ.ಮೀ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ.
ಚಿಕ್ಕಪೇಟೆ ವಿಭಾಗದಲ್ಲಿ ಕನಕನಪಾಳ್ಯ ರಸ್ತೆ (ಅಶೋಕ ಪಿಲ್ಲರ್- ಆರ್.ವಿ ಟೀಚರ್ ಕಾಲೇಜ್‌ನವರೆಗೆ) 0.8 ಕಿ.ಮೀ ಹಾಗೂ ಟಿ.ಮರಿಯಪ್ಪ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು. ಪಶ್ಚಿಮ ಪಾಲಿಕೆ ವಿಭಾಗದಲ್ಲಿ ಬುಧವಾರ 3.08 ಕಿ.ಮೀ.ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಯಿತು.
ಪಾಲಿಕೆಯ ರಾಜರಾಜೇಶ್ವರಿನಗರ ವಿಭಾಗ, ಕೆಂಗೇರಿ ವಿಭಾಗದಲ್ಲಿ ಬಿಡಿಎ 100 ಫೀಟ್ ರಸ್ತೆ (ಸೊನ್ನೇನಹಳ್ಳಿ ವೃತ್ತ - ಬಿಡಬ್ಲ್ಯೂಎಸ್‌ಎಸ್‌ಬಿ ವಾಟರ್ ಟ್ಯಾಂಕ್ ರಸ್ತೆ), ಬಿಜಿಎಸ್ ಬ್ಯಾಕ್ ಗೇಟ್ ಮೈಲಸಂದ್ರ, ಹೊಸಹಳ್ಳಿ ಮುಖ್ಯ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.