ಬೆಂಗಳೂರಲ್ಲಿ ಖಾಸಗಿ ಬಸ್‌ಗಳ ಕಿರಿಕಿರಿ ತಪ್ಪಿಸಲು ಸಿದ್ಧತೆ

KannadaprabhaNewsNetwork |  
Published : Jul 16, 2026, 04:45 AM ISTUpdated : Jul 16, 2026, 05:12 AM IST
Bengaluru

ಸಾರಾಂಶ

ನಗರದಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ದೂಳೆಬ್ಬಿಸಿ ಶತಮಾನದ ಪದ್ಧತಿಗೆ ತಿಲಾಂಜಲಿ ಹಾಡಿದ ಸಚಿವ ಕೃಷ್ಣ ಭೈರೇಗೌಡರ ಚಾಟಿ ಸದ್ಯದಲ್ಲೇ ಖಾಸಗಿ ಬಸ್‌ಗಳ ಮೇಲೆ ಬೀಸಲಿದೆ.

ಉಮಾಶಂಕರ ಕಾರ್ಯ

  ಬೆಂಗಳೂರು :  ನಗರದಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ದೂಳೆಬ್ಬಿಸಿ ಶತಮಾನದ ಪದ್ಧತಿಗೆ ತಿಲಾಂಜಲಿ ಹಾಡಿದ ಸಚಿವ ಕೃಷ್ಣ ಭೈರೇಗೌಡರ ಚಾಟಿ ಸದ್ಯದಲ್ಲೇ ಖಾಸಗಿ ಬಸ್‌ಗಳ ಮೇಲೆ ಬೀಸಲಿದೆ. ಟ್ರಾಫಿಕ್ ಸಿಗ್ನಲ್‌ಗಳ ಸುತ್ತಮುತ್ತ 75 ಮೀ. ಅಂತರದಲ್ಲಿ ಯಾವುದೇ ಬಸ್‌ಗಳು ನಿಲ್ಲಿಸುವಂತಿಲ್ಲ. ನಿಲ್ಲಿಸಿರುವುದು ಕಂಡು ಬಂದಲ್ಲಿ ಪಾಲಿಕೆ ಅಧಿಕಾರಿಗಳು ತಕ್ಷಣ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿ ನಗರದಲ್ಲಿ ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಿ ಎಂದು ಹೇಳಿದ್ದಾರೆ.

ಸಂಚಾರ ಪೊಲೀಸರಿಗೆ ಪತ್ರ:

ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಸದ್ಯದಲ್ಲೇ ಅಧಿಕಾರಿಗಳು ನಿಗದಿತ ಗುರಿ ತಲುಪಲಿದ್ದಾರೆ. ಈ ತೆರವು ಕಾರ್ಯಾಚರಣೆ ಮುಗಿದ ತಕ್ಷಣ ಮೆಜೆಸ್ಟಿಕ್, ಬ್ಯಾಟರಾಯನಪುರ ಸ್ಯಾಟಲೈಟ್ ಬಸ್ ನಿಲ್ದಾಣ, ಕಲಾಸಿಪಾಳ್ಯ ಬಸ್ ನಿಲ್ದಾಣಗಳ ಪಕ್ಕದ ಸಿಗ್ನಲ್ ಗಳ ಸಮೀಪ ಖಾಸಗಿ ಬಸ್‌ಗಳನ್ನು ಸಾಲು ಸಾಲಾಗಿ ನಿಲ್ಲಿಸಿ ಪಾದಚಾರಿಗಳು, ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿವೆ. ಈ ಕುರಿತು ಪಾಲಿಕೆ ಅಧಿಕಾರಿಗಳು ಸಧ್ಯದಲ್ಲೇ ಸಂಚಾರ ಪೊಲೀಸರಿಗೆ ಪತ್ರ ಬರೆಯಲಿದ್ದಾರೆ.

75 ಮೀ.ಅಂತರದಲ್ಲಿ ಬಸ್‌ ನಿಲುಗಡೆ ಇಲ್ಲ:

ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಗರದ ವಾಹನ ಸವಾರರ ಕಿರಿಕಿರಿ ನನಗೆ ಅರ್ಥವಾಗಿದೆ. ಕೆಲವೇ ಸೆಕೆಂಡುಗಳಲ್ಲಿ ಮುಂದೆ ಹೋಗಲು ದೊರೆಯುವ ಗ್ರೀನ್ ಸಿಗ್ನಲ್‌ನಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತರೆ ವಾಹನ ಸವಾರರ ಪರಿಸ್ಥಿತಿ ಏನಾಗಬೇಕು. ಆದ್ದರಿಂದ ಟ್ರಾಫಿಕ್ ಸಿಗ್ನಲ್ ಗಳು ಹಾಗೂ ಸುತ್ತಮುತ್ತ ನಿರ್ಮಿಸಿರುವ ರಸ್ತೆ ಉಬ್ಬುಗಳನ್ನು ತೆಗೆದು ಹಾಕಬೇಕು, ಸಿಗ್ನಲ್‌ಗಳ ಸುತ್ತ 75 ಮೀ. ಅಂತರದಲ್ಲಿ ಯಾವುದೇ ಬಸ್‌ಗಳನ್ನು ನಿಲ್ಲಿಸುವಂತಿಲ್ಲ. ಸಿಗ್ನಲ್‌ಗಳಿಂದ ಮುಂದೆ ಹೋಗಿ ಬಸ್‌ಗಳು ನಿಲ್ಲುವ ವ್ಯವಸ್ಥೆಯನ್ನು ಅಧಿಕಾರಿಗಳು ಇತರೆ ಇಲಾಖೆಗಳ ಜತೆ ಮಾತನಾಡಿ ಸಮಸ್ಯೆ ಪರಿಹರಿಸಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.

ಸಚಿವರ ಈ ಮಾತುಗಳಂತೆ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಮೆಜೆಸ್ಟಿಕ್ ಸುತ್ತಮುತ್ತ ಆರು ಪ್ರಮುಖ ಸಿಗ್ನಲ್ ಗಳು(ಆನಂದರಾವ್ ವೃತ್ತ, ಧನ್ವಂತರಿ ರಸ್ತೆ, ಶಾಂತಲಾ ಸಿಲ್ಕ್ ಹೌಸ್ ಜಂಕ್ಷನ್, ಉಪ್ಪಾರಪೇಟೆ ಪೊಲೀಸ್ ಠಾಣೆ ಜಂಕ್ಷನ್, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸಮೀಪದ ಸಿಗ್ನಲ್, ಓಕಳಿಪುರಂ ಸಿಗ್ನಲ್, ಒಂದು ಅಂಡರ್ ಪಾಸ್), ಕಲಾಸಿಪಾಳ್ಯದ ಸುತ್ತಮುತ್ತ 4 ಪ್ರಮುಖ ಟ್ರಾಫಿಕ್ ಸಿಗ್ನಲ್ (ಬಸಪ್ಪ ಸರ್ಕಲ್ ವೃತ್ತ, ಕಿಮ್ಸ್ ಆಸ್ಪತ್ರೆ ವೃತ್ತ, ವೆಂಕಟರಮಣ ಸ್ವಾಮಿ ದೇವಸ್ಥಾನದ ಸಿಗ್ನಲ್, ಸಿಟಿ ಮಾರುಕಟ್ಟೆ ಸಮೀಪ ಸಿಗ್ನಲ್), ಮೈಸೂರು ರಸ್ತೆಯ ಬ್ಯಾಟರಾಯನಪುರ ಸ್ಯಾಟಲೈಟ್ ಬಸ್ ನಿಲ್ದಾಣ ಸಮೀಪ ಎರಡು ಪ್ರಮುಖ ಸಿಗ್ನಲ್ (ಮೈಸೂರು ರಸ್ತೆಯಲ್ಲಿ ಶ್ರೀರಾಮದೇವಸ್ಥಾನ ಬಳಿ ಸಿಗ್ನಲ್, ಸ್ಯಾಟಲೈಟ್ ಬಸ್ ನಿಲ್ದಾಣ ಸಮೀಪದ ಸಿಗ್ನಲ್) ಸುತ್ತಮುತ್ತ ಸರ್ಕಾರಿ ಬಸ್‌ಗಳು ನಿಲ್ಲುವುದೇ ಇಲ್ಲ. ಇಲ್ಲಿ ಖಾಸಗಿ ಬಸ್‌ಗಳು ಗಂಟೆಗಟ್ಟಲೇ ನಿಲ್ಲಿಸಿ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿವೆ.

ಶುಕ್ರವಾರ, ಶನಿವಾರ ಹಾಗೂ ರಜಾ ದಿನಗಳಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ಪ್ರವೇಶಿಸುವ ಬಿಎಂಟಿಸಿ ಬಸ್‌ಗಳು ತಿರುಗಲೂ ಅವಕಾಶವಿಲ್ಲದ ರೀತಿಯಲ್ಲಿ ಇಲ್ಲಿ ಖಾಸಗಿ ಬಸ್‌ಗಳು ನಿಲುಗಡೆ ಮಾಡುವುದರಿಂದ ವಾಹನ ಸವಾರರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಈ ವೇಳೆ ಪಾದಚಾರಿಗಳು, ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರೂ ಜೀವ ಭಯದಲ್ಲಿಯೇ ಓಡಾಡುವಂತಾಗಿದೆ. ಆನಂದರಾವ್ ಸರ್ಕಲ್ ನಿಂದ ಕಪಾಲಿ ಚಿತ್ರಮಂದಿರದ ಮೂಲಕ ಕೆಂಪೇಗೌಡ ರಸ್ತೆ ಸಿಗ್ನಲ್ ತಲುಪುವ ವಾಹನಗಳಿಗೂ ಬಸ್‌ಗಳಿಂದ ಕಿರಿಕಿರಿ ಸಾಮಾನ್ಯವಾಗಿದೆ.

ಈ ಸಂಬಂಧ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರದೀಪ್ ಕನ್ನಡಪ್ರಭದೊಂದಿಗೆ ಮಾತನಾಡಿ, ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ಇನ್ನೇನೋ ಮುಗಿಯಲಿದೆ. ಈ ಕಾರ್ಯಾಚರಣೆ ಮುಗಿದ ತಕ್ಷಣ ಟ್ರಾಫಿಕ್ ಸಿಗ್ನಲ್ ಬಳಿ ಇರುವ ಹಂಪ್ಸ್(ರಸ್ತೆ ಉಬ್ಬುಗಳು), ಸಿಗ್ನಲ್‌ಗಳ ಬಳಿ ಬಸ್ ನಿಲುಗಡೆ ನಿಷೇಧ ಸೇರಿದಂತೆ ಎಲ್ಲಾ ಅಡ್ಡಿಗಳನ್ನು ತೆರವು ಕಾರ್ಯಾಚರಣೆ ನಡೆಸುತ್ತೇವೆ. ಈ ಸಂಬಂಧ ಪೊಲೀಸರಿಗೂ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.

ನಗರದ ಪೂರ್ವಭಾಗದಿಂದ ಪಶ್ಚಿಮ ಭಾಗದ ಕಡೆಗೆ ತೆರಳುವ ಲಕ್ಷಾಂತರ ವಾಹನ ಸವಾರರು ಮೆಜೆಸ್ಟಿಕ್ ಸುತ್ತಮುತ್ತ 6 ಸಿಗ್ನಲ್‌ಗಳು ಹಾಗೂ ಮೈಸೂರು ರಸ್ತೆಯ ಬ್ಯಾಟರಾಯನಪುರ ಸ್ಯಾಟಲೈಟ್ ಬಸ್ ನಿಲ್ದಾಣದ ಸಮೀಪದ ಸಿಗ್ನಲ್‌ಗಳು ದಾಟಲೇಬೇಕಾದ ಅನಿವಾರ್ಯತೆ ಇದೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿಂದಾಗಿ ಖಾಸಗಿ ಬಸ್ ನಿಲುಗಡೆ ಸಮಸ್ಯೆ ಹಾಗೆಯೇ ಮುಂದುವರಿದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬರಗಾಲ ಘೋಷಿಸಿ ರೈತರಿಗೆ ಪರಿಹಾರ ನೀಡಿ
ಕಡ್ಲೇವಾಡ ಕೆರೆಗೆ ನೀರು ಹರಿಸಲು ಆಗ್ರಹ