ಬ್ಯಾಡಗಿ: ಅಸಮರ್ಪಕ ಮಳೆಯಿಂದ ಕೃಷಿಕರ ಬದುಕು ಅನಿಶ್ಚಿತತೆಯಿಂದ ಕೂಡಿದ್ದು, ಕೂಡಲೇ ಸರ್ಕಾರ ರಾಜ್ಯದೆಲ್ಲೆಡೆ ಬರಗಾಲ ಎಂದು ಘೋಷಿಸುವಂತೆ ರೈತ ಹೋರಾಟ ಸಮಿತಿ ಕಾರ್ಯಕರ್ತರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಬೆಳೆ ನಾಶಪಡಿಸುತ್ತಿದ್ದಾರೆ: ಗೋಣೆಪ್ಪ ಸಂಕಣ್ಣನವರ ಮಾತನಾಡಿ, ಬಿತ್ತನೆ ಮಾಡಿದ ರೈತರು ಮಳೆ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೊರತೆಯಿಂದ ಕೆಲವರು ಮತ್ತೊಮ್ಮೆ ಬಿತ್ತನೆ ಮಾಡಿದ್ದಾರೆ. ಇನ್ನೂ ಕೆಲವರು ಮಳೆ ಬಾರದೆ ಬೆಳೆ ನಾಶಪಡಿಸಿದ್ಧಾರೆ. ಇದೀಗ ಕೆಲವು ಕಡೆ ಮಳೆಯಾಗಿದೆ. ಇನ್ನೂ ಕೆಲವೆಡೆ ಬಿತ್ತನೆಯೇ ಆಗಿರುವುದಿಲ್ಲ, ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಬರದ ಛಾಯೆಯಿದ್ದು ಸರ್ಕಾರ ಕೂಡಲೇ ಬರಗಾಲ ಪ್ರದೇಶ ಎಂದು ಘೋಷಿಸುವಂತೆ ಆಗ್ರಹಿಸಿದರು.
ಪ್ರತಿ ಎಕರೆಗೆ ಕನಿಷ್ಠ ರು. 30 ಸಾವಿರ ಪರಿಹಾರ: ಚಂದ್ರಶೇಕರ ಮಾಗೋಡ ಮಾತನಾಡಿ, ಬರದ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ ರು.30 ಸಾವಿರ ಪರಿಹಾರ ಘೋಷಿಸಬೇಕು, ರೈತರ ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಬೇಕು, ರೈತ ಕಾರ್ಮಿಕರಿಗೆ ಗುಳೆ ಹೋಗದೆ ಬೇರೆ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕಳೆದ ಸಾಲಿನ ಪರಿಹಾರ ಸಮರ್ಪಕವಾಗಿ ಎಲ್ಲಾ ರೈತರಿಗೆ ಸಂದಾಯವಾಗಿಲ್ಲ, ಕಾಟಾಚಾರಕ್ಕೆ ಕೆಲವೆ ರೈತರಿಗೆ ಪರಿಹಾರ ಘೋಷಣೆ ಮಾಡಿದ್ದು, ಅನ್ಯಾಯವಾಗಿರುವುದನ್ನು ಸರಿಪಡಿಸಿ ಪುನರ್ ಪರಿಶೀಲಿಸಿ ಎಲ್ಲ ರೈತರಿಗೆ ಪರಿಹಾರ ಘೋಷಣೆ ಮಾಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಸಮಿತಿ ಸದಸ್ಯರು ಉಪಸ್ಥಿತರಿದ್ದರು.