ಬೈಂದೂರು: ಉಡುಪಿ ಜಿಲ್ಲೆಯಲ್ಲಿ ದನ ಮತ್ತು ಎಮ್ಮೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಆತಂಕಕಾಗಿ ಬೆಳವಣಿಗೆಯಾಗಿದ್ದು, ಈ ಬಗ್ಗೆ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಅಧ್ಯಯನ ನಡೆಸಿ ಕಾರಣ ಪತ್ತೆ ಮಾಡಬೇಕು ಮತ್ತು ಇದಕ್ಕೆ ಸೂಕ್ತ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕು ಎಂದು ಬೈಂದೂ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸೂಚಿಸಿದ್ದಾರೆ.
ಜಾನುವಾರು ವಿಮೆ ಹೆಚ್ಚಿಸಿ: ಬೈಂದೂರು ಕ್ಷೇತ್ರದಲ್ಲಿ ಸುಮಾರು 72,000 ಹಸುಗಳಿದ್ದು, ಅವುಗಳಲ್ಲಿ ಕೇವಲ 15,000 ಹಸುಗಳು ವಿಮಾ ಯೋಜನೆಗೆ ಒಳಪಟ್ಟಿವೆ. ಹಾಗಾಗಿ ಜಾನುವಾರುಗಳ ಆಕಸ್ಮಿಕ ಮರಣ ಸಂದರ್ಭದಲ್ಲಿ ಹೈನುಗಾರರ ಕುಟುಂಬಕ್ಕೆ ಅಗತ್ಯ ಪರಿಹಾರ ಸಿಗುತ್ತಿಲ್ಲ. ರೈತರಿಗೆ ವಿಮೆ ಬಗ್ಗೆ ಮಾಹಿತಿ ನೀಡಿ, ಎಲ್ಲಾ ಜಾನುವಾರುಗಳನ್ನು ವಿಮಾ ಯೋಜನೆಗೊಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದರು.
ಪಶು ಔಷಧಿಗಳ ಕೊರತೆ!: ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳ ಲಭ್ಯವಿಲ್ಲ ಎಂಬ ದೂರುಗಳು ಬಂದಿದ್ದು, ಅದು ಇಲಾಖೆಯ ವೈಫಲ್ಯವನ್ನು ತೋರಿಸುತ್ತಿದೆ. ದಾರಿ ಮಾಡಿ ಕೊಡುತ್ತದೆ. ಈ ವಿಚಾರದ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಿ ಯಾವ ಕಾರಣಕ್ಕೂ ಔಷಧಿ ಕೊರತೆ ಆಗದಂತೆ ಕ್ರಮ ವಹಿಸಲು ತಾಕೀತು ಮಾಡಿದರು.
ಪ್ರೋತ್ಸಾಹಧನ ವಿಳಂಬ ?: ಮಾರ್ಚ್ ತಿಂಗಳವರೆಗೆ ಹೈನುಗಾರರಿಗೆ ಕೆಎಂಎಫ್ ಪ್ರೋತ್ಸಾಹಧನ ಪಾವತಿ ಮಾಡಲಾಗಿದೆ. 3 ತಿಂಗಳ ಬಾಕಿ ಇದೆ ಎಂದು ಕೆಎಂಎಫ್ ಅಧಿಕಾರಿಗಳು ನೀಡಿದ ವಿವರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಗ್ರಾಮೀಣ ರೈತರಿಗೆ ಜಾನುವಾರುಗಳೇ ಆದಾಯದ ಮೂಲವಾಗಿರುವುದರಿಂದ, ಕೂಡಲೇ ಬಾಕಿ ಪ್ರೋತ್ಸಾಹಧನವನ್ನು ಪಾವತಿಸಬೇಕು ಮತ್ತು ಮುಂದೆ ಪ್ರತಿತಿಂಗಳು ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ರೆಡ್ಡಪ್ಪ, ಕುಂದಾಪುರ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಹೆಗ್ಡೆ, ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧ ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳು, ಕೆಎಂಎಫ್ ಪ್ರತಿನಿಧಿಗಳು ಹಾಗೂ ಪಶುಸಖಿಯರು ಉಪಸ್ಥಿತರಿದ್ದರು.
ಕಾಡುಹಂದಿಗಳ ಕಳೆಬರ ಪತ್ತೆ: ಜನರಲ್ಲಿ ಆತಂಕ ಕಳೆದ ಕೆಲವು ದಿನಗಳಿಂದ ಬೈಂದೂರಿನ ಹಲವು ಗ್ರಾಮಗಳ ಅರಣ್ಯ ಸರಹದ್ದಿನಲ್ಲಿ ಕಾಡುಹಂದಿಗಳ ಕಳೆಬರಗಳು ಕೊಳೆತಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಂಕ್ರಮಿಕ ರೋಗದ ಬಗ್ಗೆ ಜನರಲ್ಲಿ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಅರಣ್ಯ, ಆರೋಗ್ಯ, ಪಶುಸಂಗೋಪನೆ ಇಲಾಖೆ ಹಾಗೂ ಸ್ಥಳೀಯಾಡಳಿತಗಳ ಅಧಿಕಾರಿಗಳು ಸಮನ್ವಯದಿಂದ ಪರಿಶೀಲನೆ ನಡೆಸಿ, ಈ ಕಾಡುಹಂದಿಗಳ ಸಾವಿಗೆ ಕಾರಣ ಪತ್ತೆ ಮಾಡಿ, ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡು ಜನರ ಆತಂಕ ದೂರ ಮಾಡಬೇಕು ಎಂದು ಶಾಸಕರ ಹೇಳಿದರು. ಇದಕ್ಕೆ ಪಶುಇಲಾಖೆ ಅಧಿಕಾರಿಗಳು, ಈಗಾಗಲೇ ಮೃತ ಕಾಡುಹಂದಿಗಳ ಮಾದರಿಯನ್ನು ಸಂಗ್ರಹಿಸಿ, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ, ವರದಿ ಬಂದಿಲ್ಲ ಎಂದರು.