- ಚಿಕ್ಕಮಗಳೂರು ಜನಪ್ರತಿನಿಧಿಗಳೊಂದಿಗೆ ಅರಣ್ಯ ಸಚಿವರ ಸಭೆ
ಅರಣ್ಯ ಕಾಯಿದೆ 1963ರ ಸೆಕ್ಷನ್ 4ರಡಿ ಅಧಿಸೂಚನೆ ಆಗುವ ಮುನ್ನ ಮಂಜೂರಾಗಿರುವ ಭೂಮಿಯನ್ನು ಅರಣ್ಯದಿಂದ ಕೈಬಿಡಲು ಸರ್ಕಾರಕ್ಕೆ ಅವಕಾಶವಿದೆ. ಅಧಿಸೂಚನೆ ನಂತರ 30-40 ವರ್ಷಗಳಿಂದ ಮನೆ ಕಟ್ಟಿರುವ, ಉಳಿಮೆ ಮಾಡುತ್ತಿರುವ ಜನರಿಗೆ ನ್ಯಾಯ ಕೊಡಿಸಲು ಕೇಂದ್ರ ಹಾಗೂ ಸುಪ್ರೀಂ ಕೋರ್ಟ್ ಗೆ ವಿಶೇಷ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಮತ್ತು ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿ ಗಳೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ವಸತಿ ಪ್ರದೇಶ, ಪಟ್ಟಾ ಭೂಮಿ ಇತ್ಯಾದಿ ಇರುವ ಪರಿಭಾವಿತ ಅರಣ್ಯ ಹಾಗೂ ಸೆಕ್ಷನ್ 4 ಅಧಿಸೂಚನೆ ನಂತರ ಮಂಜೂರಾದ ಜಮೀನಿಗೆ ಪರ್ಯಾಯವಾಗಿ ಬೇರೆಡೆ ಲಭ್ಯವಿರುವ ಅರಣ್ಯೇತರ ಭೂಮಿ ನೀಡಿ ಈ ಜಮೀನನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಡುವಂತೆ ಸುಪ್ರೀಂಕೋರ್ಟ್ ಮತ್ತು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಹಲವು ಪ್ರಕರಣಗಳಲ್ಲಿ ಸೆಕ್ಷನ್ 4 ಅಧಿಸೂಚನೆ ಆಗಿ 60-70 ವರ್ಷವಾಗಿದ್ದರೂ ಇನ್ನೂ ಸೆಕ್ಷನ್ 17 ಆಗಿರುವುದಿಲ್ಲ. 1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿ ಬಳಿಕ ಈಗ ಅಂತಹ ಅರಣ್ಯ ಕೈಬಿಡುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಕೇಂದ್ರ ಹಾಗೂ ಸುಪ್ರೀಂಕೋರ್ಟ್ ಗೆ ಮನವಿ ಮಾಡುವುದು ಅನಿವಾರ್ಯ ಎಂದು ತಿಳಿಸಿದರು.ಜಂಟಿ ಸರ್ವೆ: ಚಿಕ್ಕಮಗಳೂರು ಜಿಲ್ಲೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿದ್ದು, ಇಲ್ಲಿ ಸಮೃದ್ಧ ಕಾನನ ಪ್ರದೇಶವಿದೆ. ಒಂದೇ ಸರ್ವೆ ನಂಬರ್ ನಲ್ಲಿ 300-400 ಎಕರೆ ಜಮೀನಿದ್ದು, ಜಂಟಿ ಸರ್ವೆ ಆಗದ ಕಾರಣ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಕಂದಾಯ ಜಮೀನಿನ ಜಂಟಿ ಸರ್ವೆ ಮಾಡಿ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸಲು ಪ್ರಯತ್ನಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಈಗಾಗಲೇ 2022ರಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿರುವ ಡೀಮ್ಡ್ ಅರಣ್ಯ ಕುರಿತ ಪ್ರಮಾಣಪತ್ರ ಸಾರ್ವಜನಿಕರಿಗೆ ಲಭ್ಯವಾಗುವಂತೆ ಇಲಾಖೆ ಅಧಿಕೃತ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡುವಂತೆ ಸಹ ಅರಣ್ಯ ಸಚಿವರು ಸೂಚನೆ ನೀಡಿದರು.
ಹಾಸನ ಜಿಲ್ಲೆಯ ಅರಸೀಕೆರೆ ವ್ಯಾಪ್ತಿಯಲ್ಲಿನ ಕರಡಿ ಧಾಮದ ಸುತ್ತ ಪ್ರಸ್ತುತ 10 ಕಿ.ಮೀ. ಬಫರ್ ವಲಯ ಎಂದು ಘೋಷಿಸ ಲಾಗಿರುವ ಕಾರಣ ಗಡಿ ಭಾಗದ ಚಿಕ್ಕಮಗಳೂರು ರೈತರೂ ಸಂಕಷ್ಟ ಎದುರಿಸುವಂತಾಗಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು, ಈ ಮಿತಿಯನ್ನು ಒಂದು ಕಿ.ಮೀ.ಗೆ ಇಳಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಭರವಸೆ ನೀಡಿದರು.ಸಭೆಯಲ್ಲಿ ಶಾಸಕರಾದ ಟಿ.ಡಿ. ರಾಜೇಗೌಡ, ಎಚ್.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್. ಶ್ರೀನಿವಾಸ್ ಮತ್ತು ಕೆ.ಆರ್. ಆನಂದ್, ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಸುಭಾಷ್ ಮಾಲ್ಕಡೆ, ಪಿಸಿಸಿಎಫ್ ಬಿ.ಪಿ. ರವಿ, ಬಿಸ್ವಜಿತ್ ಮಿಶ್ರಾ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.
6 ಕೆಸಿಕೆಎಂ 1ಬೆಂಗಳೂರಿನ ವಿಕಾಸಸೌಧದಲ್ಲಿ ರಾಜ್ಯ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅಧ್ಯಕ್ಷತೆಯಲ್ಲಿ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಶಾಸಕರುಗಳು ಮತ್ತು ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು.