)
ಉಡುಪಿ: ಕೇಂದ್ರ ಸರ್ಕಾರದ ನೀಡುವ ದೀನ್ ದಯಾಲ್ ಉಪಾಧ್ಯಾಯ್ ಸತತ್ ಪಂಚಾಯತ್ ವಿಕಾಸ್ ಪುರಸ್ಕಾರ್ (ಡಿಡಿಯುಪಿಎಸ್‌ವಿಪಿ)ಗೆ ಉಡುಪಿ ಜಿಲ್ಲೆಯ 5 ಗ್ರಾಪಂಗಳು ಆಯ್ಕೆಯಾಗಿವೆ. ರಾಜ್ಯದಿಂದ ಒಟ್ಟು 6 ಗ್ರಾಪಂಗಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಉಡುಪಿ ಜಿಲ್ಲೆಯ 5 ಗ್ರಾಪಂಗಳಿಗೆ ಈ ಗೌರವ ಸಲ್ಲುತ್ತಿದೆ.ಬಡತನ ನಿರ್ಮೂಲನೆ, ನೀರಿನ ಸದ್ಬಳಕೆ, ಸ್ವಯಂ ಅಭಿವೃದ್ಧಿ ಇತ್ಯಾದಿ ಮಾನದಂಡಗಳಡಿ 5 ವಿಭಾಗಗಳಲ್ಲಿ ಪ್ರತಿ ರಾಜ್ಯದಿಂದ 6 ಗ್ರಾಪಂಗಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.ಅದರಂತೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಪಂಗೆ ಬಡತನ ನಿರ್ಮೂಲನೆ ಮತ್ತು ಜೀವನೋಪಾಯಗಳ ವರ್ಧನೆ ವಿಭಾಗದಲ್ಲಿ ಪ್ರಥಮ ಸ್ಥಾನ ದೊರಕಿದೆ.
ಜೊತೆಗೆ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕಿನ ಹಾಲನಾಯಕನಹಳ‍್ಳಿ ಪಂಚಾಯತ್ ಮಕ್ಕಳಸ್ನೇಹಿ ಪಂಚಾಯತ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.ಉಡುಪಿ ಜಿಲ್ಲೆಯ ಈ ಗ್ರಾಮ ಪಂಚಾಯತಿಗಳು ಆಯ್ಕೆಯಾಗಿರುವುದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸಾಧನೆಗೆ ಆಯಾ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಗ್ರಾಮಸ್ಥರ ಶ್ರಮ ಕಾರಣವಾಗಿದೆ. ಈ ಸಾಧನೆಗಳು ಇತರ ಪಂಚಾಯಿತಿಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದ್ದಾರೆ.