ಹಗರಿಬೊಮ್ಮನಹಳ್ಳಿ: ಡಿಗ್ರಿ ಪರೀಕ್ಷಾ ಶುಲ್ಕ ಕಡಿಮೆ ಮಾಡಿ, ಪರೀಕ್ಷೆ ದಿನಾಂಕವನ್ನು ಮುಂದೂಡಬೇಕು ಎಂದು ಒತ್ತಾಯಿಸಿ ಪಟ್ಟಣದ ಜಿವಿಪಿಪಿ ಪ್ರಥಮ ದರ್ಜೆ ಕಾಲೇಜಿನ ಭಾರತ ವಿದ್ಯಾರ್ಥಿ ಫೆಡರೇಷನ್ ಸದಸ್ಯರು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ನೀಡುವ ಮೂಲಕ ವಿಎಸ್‌ಕೆಯುಬಿ ಕುಲಸಚಿವರನ್ನು ಒತ್ತಾಯಿಸಿದರು.
ಈ ಕುರಿತು ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ದೊಡ್ಡಬಸವರಾಜ ಮಾತನಾಡಿ, ವಿದ್ಯಾರ್ಥಿಗಳ ಪೋಷಕರು ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುವಂತಹ ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆ ಶುಲ್ಕವನ್ನು ಹೆಚ್ಚಳ ಮಾಡಿರುವುದು ಸಮಂಜಸವಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಕುಟುಂಬಗಳು ಆರ್ಥಿಕವಾಗಿ ಕುಗ್ಗಿರುವುದರಿಂದ ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣ ಬಿಟ್ಟು ಬೆಂಗಳೂರು, ಮಂಗಳೂರು ನಗರಗಳಿಗೆ ದುಡಿಯಲಿಕ್ಕೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಓದಬೇಕು ಎಂಬುವ ಹಂಬಲದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಹೆಚ್ಚಳ ಬಿಸಿತುಪ್ಪವಾಗಿದೆ. ಎರಡು ವರ್ಷದ ಹಿಂದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ₹೧೫೦ ಮತ್ತು ₹೨೫೦ ಮಾತ್ರ ಇದ್ದ ಪರೀಕ್ಷೆ ಶುಲ್ಕ, ಈಗ ದಿಢೀರ್ ₹೧೨೦೦ಕ್ಕೆ ಏರಿಸಿರುವುದರಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಪರೀಕ್ಷೆ ಶುಲ್ಕ ಹೆಚ್ಚಳ ಮಾಡಿರುವುದನ್ನು ಕೂಡಲೇ ವಾಪಸ್ ಪಡೆದು, ನೇರವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಭರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಜಯಸೂರ್ಯ ಮಾತನಾಡಿ, ಪರೀಕ್ಷೆ ಶುಲ್ಕವನ್ನು ಕಡಿಮೆ ಮಾಡದಿದ್ದರೆ ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು. ಎರಡು ವರ್ಷದ ಹಿಂದೆ ಇದ್ದ ಪರೀಕ್ಷೆ ಶುಲ್ಕವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಎಸ್‌ಎಫ್‌ಐನ ಶಿವರೆಡ್ಡಿ, ಹುಲುಗಪ್ಪ, ಮಾರುತಿ, ಮಂಜು, ಬಿಂದು, ಅರುಣ, ನಿಸರ್ಗ, ಗಂಗಮ್ಮ, ಕವಿತಾ, ರಾಜೀವ, ಉದಯ್ ಹಾಗೂ ವಿದ್ಯಾರ್ಥಿಗಳು ಇದ್ದರು.