ಕನ್ನಡಪ್ರಭ ವಾರ್ತೆ ಹೊಸಪೇಟೆ
ಒಳಮೀಸಲಾತಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತನ್ನ ಹಳೇ ಚಾಳಿಯಂತೆ ವಿಳಂಬ ಧೋರಣೆ ಮುಂದುವರೆಸಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮಾದಿಗ ಸಮಾಜದ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ದೂರಿದರು.ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿಗೆ ಅಧಿವೇಶನದಲ್ಲಿ ಅನುಮೋದನೆ ಕೊಡುವ ನಿರೀಕ್ಷೆ ಇತ್ತು. ಆದರೆ, ಇವರೇ ನೇಮಿಸಿದ ಸಮಿತಿ ನೀಡಿದ ವೈಜ್ಞಾನಿಕ ವರದಿಯನ್ನು ಅವೈಜ್ಞಾನಿಕ ವರದಿಯಾಗಿದೆ, ಜಾರಿ ಮಾಡಬಾರದು ಎಂದಿದ್ದಾರೆ. ನ್ಯಾ. ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ವರದಿ ಪಡೆದಿರುವ ಸರ್ಕಾರ ಶಿಫಾರಸ್ಸು ಜಾರಿ ಮಾಡದಿರಲು ಕಾರಣ, ಕಾಂಗ್ರೆಸ್ ಒಳ ಮೀಸಲಾತಿ ಪರ ಎಂದೂ ಇರಲಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಎಸ್ಸಿ ಸಮುದಾದಯಲ್ಲಿ ಬಲಿಷ್ಠರಾದ ಪ್ರಿಯಾಂಕ್ ಖರ್ಗೆ ಆ್ಯಂಡ್ ಟೀಂ, ಡಾ. ಜಿ. ಪರಮೇಶ್ವರ ಒಳಮೀಸಲಾತಿ ವಿರೋಧ ಮಾಡಿದ್ದಾರೆ. ಇವರ ನಿಜ ಬಣ್ಣ ಈಗ ಸಮಾಜಕ್ಕೆ ಗೊತ್ತಾಗಿದೆ. ದಲಿತ ಸಮುದಾಯದವರೇ ಕಟು ವಿರೋಧ ಮಾಡಿ ತಡೆದಿದ್ದಾರೆ. ಇದನ್ನು ಸಮಾಜ ಖಂಡಿಸುತ್ತದೆ ಎಂದರು.ಕಾಂಗ್ರೆಸ್ ಧೋರಣೆ ಮತ್ತೆ ನಿಚ್ಚಳವಾಗಿದೆ. ಸಿಎಂ ಅವರಿಗೆ ಬದ್ದತೆ ಇಲ್ಲ. ಸಮಾಜವನ್ನು ತುಳಿಯುತ್ತಾ ಬಂದಿದ್ದಾರೆ. ಮುಂದಿನ ಕ್ಯಾಬಿನೆಟ್ ನಲ್ಲಿ ಒಪ್ಪಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡ ಪೂಜಪ್ಪ ಮಾತನಾಡಿ, ಸರ್ಕಾರ ಸುಮ್ಮನೆ ವಿಳಂಬ ನೀತಿ ಅನುಸರಿಸುತ್ತಿದೆ. ಈಗಾಗಲೇ ಇಡೀ ರಾಜ್ಯದಲ್ಲಿ ಹೋರಾಟ ಮಾಡುತ್ತಿದ್ದೇವೆ. ಸಚಿವ ಸಂಪುಟದಲ್ಲಿ ಇರುವ ಬಲಗೈ ಸಮುದಾಯದ ನಾಯಕರಿಗೆ ಇದು ಇಷ್ಟವಿಲ್ಲ. ನಮ್ಮ ಹಕ್ಕು ನಮಗೆ ಕೊಟ್ಟುಬಿಡಿ, ಕೊಡದಿದ್ದರೆ ಹೋರಾಟ ಇನ್ನೂ ತೀವ್ರವಾಗಿ ಆರಂಭವಾಗಲಿದೆ. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕು ನಮಗೆ ಕೊಡಿ ಎಂದು ಆಗ್ರಹಿಸಿದರು.ಮಾದಿಗ ಮಹಾಸಭಾದ ಅಧ್ಯಕ್ಷ ಎಚ್. ಶೇಷು, ಸಮಾಜದ ಮುಖಂಡರಾದ ಕಣಿವೆಹಳ್ಳಿ ಮಂಜುನಾಥ, ದುರುಗೇಶ್, ಕರಿಯಪ್ಪ, ಲಕ್ಷ್ಮಮ್ಮ, ವಿಜಯಕುಮಾರ, ಎ.ಕೆ.ಮಾರೆಪ್ಪ ಮತ್ತಿತರರಿದ್ದರು.