ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಹೈಕೋರ್ಟ್ ಪೀಠವನ್ನು ಸ್ಥಾಪಿಸುವಂತೆ ಒತ್ತಾಯಿಸಿ ಅ.29ರಂದು ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಕೆ.ಎಸ್.ಬಸವಂತಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ, ಕಾನೂನು ಸಚಿವರಿಗೆ ಮನವಿ ಸಲ್ಲಿಸುವುದಾಗಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಅಧ್ಯಕ್ಷ, ಹಿರಿಯ ವಕೀಲ ಬಿ.ಎಂ.ಹನುಮಂತಪ್ಪ ತಿಳಿಸಿದ್ದಾರೆ.
ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಹೈಕೋರ್ಟ್ ಪೀಠವನ್ನು ಸ್ಥಾಪಿಸುವಂತೆ ಒತ್ತಾಯಿಸಿ ಅ.29ರಂದು ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಕೆ.ಎಸ್.ಬಸವಂತಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ, ಕಾನೂನು ಸಚಿವರಿಗೆ ಮನವಿ ಸಲ್ಲಿಸುವುದಾಗಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಅಧ್ಯಕ್ಷ, ಹಿರಿಯ ವಕೀಲ ಬಿ.ಎಂ.ಹನುಮಂತಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಿಗೆ ಮನವಿ ಅರ್ಪಿಸಿದ ನಂತರ ಮುಂದಿನ ಹಂತದಲ್ಲಿ ಹೋರಾಟಗಳನ್ನು ನಡೆಸುವ ಬಗ್ಗೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ದಶಕಗಳ ಹಿಂದೆಯೇ ದಾವಣಗೆರೆಯಲ್ಲಿ ರಾಜ್ಯದ ರಾಜಧಾನಿ ಮಾಡಬೇಕೆಂಬ ಕೂಗು ಎದ್ದು, ಚರ್ಚೆಯೂ ಆಗಿತ್ತು. ಆದರೆ, ಅದು ಕಾರಣಾಂತರಗಳಿಂದಾಗಿ ಸಾಧ್ಯವಾಗಲಿಲ್ಲ. ಈಗ ಹೈಕೋರ್ಟ್ ಪೀಠ ಸ್ಫಾತಿಸುವ ಸುವರ್ಣಾವಕಾಶ ಬಂದಿದೆ. ಪೀಠ ಸ್ಥಾಪನೆಗೆ ಅಗತ್ಯ ಕಟ್ಟಡ, ನಾಡಿನ ನಾಲ್ಕೂ ದಿಕ್ಕಿಗೂ ರಸ್ತೆ ಸಂಪರ್ಕ, ಮೂರು ದಿಕ್ಕಿಗೆ ರೈಲು ಸಂಪರ್ಕ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಲಭ್ಯಗಳೂ ಇಲ್ಲಿವೆ. ಹೈಕೋರ್ಟ್ ಪೀಠ ಆರಂಭಿಸುವಂತೆ ಹಕ್ಕೊತ್ತಾಯ ಮಂಡಿಸುತ್ತೇವೆ ಎಂದು ಹೇಳಿದರು.
ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಬೃಹತ್ ಆಂದೋಲವನ್ನೇ ಇಲ್ಲಿ ರೂಪಿಸಲಾಗುವುದು. ನ್ಯಾಯಾಂಗದ ವಿಕೇಂದ್ರೀಕರಣ ಆಗಬೇಕು. ಸಾಮಾನ್ಯ ಜನರ ಬಳಿಗೆ ನ್ಯಾಯಾಂಗ ವ್ಯವಸ್ಥೆ ಬರಬೇಕು. ಅತಿ ಕಡಿಮೆ ವೆಚ್ಚದಲ್ಲಿ ನ್ಯಾಯ ಪಡೆಯುವಂತಾಗಬೇಕೆಂಬ ಸದಾಶಯದೊಂದಿಗೆ ಹೈಕೋರ್ಟ್ ಪೀಠ ಆರಂಭಿಬೇಕು. ಮೂವರು ನ್ಯಾಯಮೂರ್ತಿಗಳ ಸಮಿತಿಗೂ ಸಮಿತಿಯಿಂದ ಮನವಿ ಅರ್ಪಿಸಲಾಗುವುದು. ಹೈಕೋರ್ಟ್ ಪೀಠ ಸ್ಥಾಪನೆ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಸಾಕಷ್ಟು ಉತ್ಸಾಹ, ಒಲವು ತೋರುತ್ತಿದ್ದಾರೆ. ಅದೇ ಕಾರಣಕ್ಕೆ ಮುಖ್ಯಮಂತ್ರಿ, ಕಾನೂನು ಸಚಿವರು, ಸಮಿತಿಯವರಿಗೆ ಮನವಿ ಸಲ್ಲಿಸಲು ಸಮಯ ನಿಗದಿಯಾಗಿದೆ. ಸ್ವತಃ ಪ್ರಧಾನಿಯೇ ಮಧ್ಯ ಪ್ರವೇಶ ಮಾಡಿ, ದಾವಣಗೆರೆಗೆ ಹೈಕೋರ್ಟ್ ಪೀಠ ಕೊಡಿಸಬೇಕು. ದಕ್ಷಿಣ ಭಾರತದಲ್ಲೂ ಸುಪ್ರೀಂ ಕೋರ್ಟ್ ಬರುವಂತಾಗಬೇಕು ಎಂದು ಅವರು ತಿಳಿಸಿದರು.
ಸಮಿತಿ ಮುಖಂಡರು, ಹಿರಿಯ ವಕೀಲರಾದ ಎ.ಎಂ.ಹೆಗಡೆ, ಎಲ್.ಎಚ್. ಅರುಣಕುಮಾರ, ಉಚ್ಚಂಗಿದುರ್ಗ ಬಸವರಾಜ, ಅನೀಸ್ ಪಾಶ, ಎಸ್.ಬಸವರಾಜ, ವಿ.ಗೋಪಾಲ, ಎನ್.ಎಂ. ಆಂಜನೇಯ ಗುರೂಜಿ, ಲೋಕಿಕೆರೆ ಸಿದ್ದಪ್ಪ, ಮುಷ್ತಾಕ್ ಅಹಮ್ಮದ್ ಇತರರು ಇದ್ದರು.
- - -
(ಬಾಕ್ಸ್)
* ಎಲ್ಲ ಮೂಲ ಸೌಕರ್ಯಗಳೂ ಇಲ್ಲಿವೆ: ಗುರುಬಸವರಾಜ
ವಕೀಲರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ಗುರುಬಸವರಾಜ ಮಾತನಾಡಿ, ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವುದರಿಂದ ನೆರೆಯ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ವಿಜಯನಗರ, ಚಿಕ್ಕಮಗಳೂರು ಜಿಲ್ಲೆಯ ವಕೀಲರು, ಕಕ್ಷಿದಾರರಿಗೂ ಅನುಕೂಲ ಆಗುತ್ತದೆ. ಎಲ್ಲ ಅವಶ್ಯಕ ಮೂಲ ಸೌಕರ್ಯ ಇಲ್ಲಿವೆ. ಸರ್ಕಾರ ಇಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸುವ ಮೂಲಕ ಮಧ್ಯ ಕರ್ನಾಟಕಕ್ಕೆ ದೊಡ್ಡ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಲಭ್ಯ ಮಾಹಿತಿ ಪ್ರಕಾರ ಹೈಕೋರ್ಟ್ನಲ್ಲಿ ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ 10,500 ಒಳಗೊಂಡಂತೆ ಇತರೆ ಜಿಲ್ಲೆಗಳ1 ಲಕ್ಷಕ್ಕೂ ಅಧಿಕ ಪ್ರಕರಣಗಳ ವಿಚಾರಣೆ ಬಾಕಿ ಇದೆ. ಇಲ್ಲಿ ಪೀಠ ಸ್ಥಾಪನೆಯಾದರೆ ಹೈಕೋರ್ಟ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಈ ಭಾಗದ ಜನರಿಗೆ ಸಮೀಪದಲ್ಲಿ, ಅತೀ ಕಡಿಮೆ ವೆಚ್ಚದಲ್ಲಿ ನ್ಯಾಯ ಸಿಗುತ್ತದೆ. ಆರಂಭದಲ್ಲಿ ಸಂಚಾರಿ ಪೀಠ ನೀಡಲಾಗುತ್ತದೆ. 3-4 ವರ್ಷದ ಪ್ರಗತಿ ಆದರಿಸಿ ಶಾಶ್ವತ ಪೀಠ ನೀಡಲಾಗುತ್ತದೆ. ಹಾಗಾಗಿ ಇಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸಲಿ. ಸರಕಾರದ ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆ ಇದೆ. ಒಂದು ವೇಳೆ ಪೀಠ ಸ್ಥಾಪಿಸದಿದ್ದರೆ ತೀವ್ರ ಸ್ವರೂಪದ ಹೋರಾಟವನ್ನೂ ನಡೆಸುತ್ತೇವೆ ಎಂದು ಗುರುಬಸವರಾಜ ಹೇಳಿದರು.
- - -
-28ಕೆಡಿವಿಜಿ4: ದಾವಣಗೆರೆಯಲ್ಲಿ ಬುಧವಾರ ಹೈಕೋರ್ಟ್ ಪೀಠ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ.ಹನುಮಂತಪ್ಪ, ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಗುರುಬಸವರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.