- ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಧ್ವನಿ ಎತ್ತಿದ ಬೆನ್ನಲ್ಲೇ ಚುರುಕಾದ ಪೊಲೀಸರು - - -
ಇಸ್ಪೀಟ್, ಮಟ್ಕಾ ಜೂಜಾಟವನ್ನು ಮಟ್ಟ ಹಾಕುವಂತೆ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ, ಹರಿಹರ ಶಾಸಕ ಬಿ.ಪಿ.ಹರೀಶ ಧ್ವನಿ ಎತ್ತಿದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಇಸ್ಪೀಟ್ ಅಡ್ಡೆಗಳು, ಇಸ್ಪೀಟ್ ಆಟದ ತಾಣಗಳ ಮೇಲೆ ಪ್ರತ್ಯೇಕವಾಗಿ ದಾಳಿ ಮಾಡಿ, 48ಕ್ಕೂ ಹೆಚ್ಚು ಜನರನ್ನು ಬಂಧಿಸಿ, ಜೂಜಾಟಕ್ಕೆ ಬಳಸಿದ್ದ ವಸ್ತುಗಳು, ನಗದು ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ತಂಡಗಳಾಗಿ ಪೊಲೀಸರು ದಾಳಿ ನಡೆಸಿದರು. 6 ಪ್ರಕರಣಗಳಲ್ಲಿ ಒಟ್ಟು ₹16,600 ನಗದು ಜಪ್ತಿ ಮಾಡಿ, 9 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ನ್ಯಾಮತಿ ತಾ. ಸವಳಂಗದ ಸಾರ್ವಜನಿಕ ಸ್ಥಳಗಳಲ್ಲಿ ಮಟ್ಕಾ ಆಡುತ್ತಿದ್ದವರ ಮೇಲೆ ಜಿಲ್ಲಾ ಎ.ಎನ್.ಟಿ.ಎಫ್ ತಂಡದ ಅಧಿಕಾರಿ- ಸಿಬ್ಬಂದಿ ದಾಳಿ ಮಾಡಿ, 3 ಪ್ರತ್ಯೇಕ ಮಟ್ಕಾ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು, ₹14,500 ನಗದು, ಮಟ್ಕಾ ಚೀಟಿ ವಶಪಡಿಸಿಕೊಂಡಿದ್ದಾರೆ. ನ್ಯಾಮತಿ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿವೆ.ಚನ್ನಗಿರಿ ತಾ. ದಾಗಿನಕಟ್ಟೆಯ 1 ಕಡೆ ಬಸವಾಪಟ್ಟಣ ಠಾಣಾಧಿಕಾರಿ-ಸಿಬ್ಬಂದಿ ಪ್ರತ್ಯೇಕ ದಾಳಿ ಮಾಡಿ, 2 ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು, ₹1600 ನಗದು, ಮಟ್ಕಾ ಚೀಟಿ ಜಪ್ತಿ ಮಾಡಿದ್ದಾರೆ. ಬಸವಾಪಟ್ಟಣ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿವೆ. ನ್ಯಾಮತಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ನ್ಯಾಮತಿ ಠಾಣಾಧಿಕಾರಿ, ಸಿಬ್ಬಂದಿ ದಾಳಿ ಮಾಡಿದ್ದು, ನಾಲ್ವರನ್ನು ವಶಕ್ಕೆ ಪಡೆದು, ₹500 ನಗದು, ಮಟ್ಕಾ ಚೀಟಿ ಜಪ್ತಿ ಮಾಡಿದ್ದಾರೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಚನ್ನಗಿರಿ ತಾ. ಗಾಳಿಹಳ್ಳಿಯಿಂದ ಹಿರೇಮಳಲಿಗೆ ಹೋಗುವ ತೋಟದ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಎ.ಎನ್.ಟಿ.ಎಫ್. ತಂಡದ ನಿರೀಕ್ಷಕರ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿ ತಂಡ ದಾಳಿ ಮಾಡಿ, ಓರ್ವನನ್ನು ವಶಕ್ಕೆ ಪಡೆದು, ₹2050 ನಗದು ಜಪ್ತಿ ಮಾಡಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹರಿಹರ ತಾ. ಗುತ್ತೂರು ಗ್ರಾಮದ ತುಂಗಭದ್ರಾ ನದಿ ದಡದ ಪಕ್ಕ ಇಸ್ಪೀಟ್ ಆಡುತ್ತಿದ್ದವರ ಮೇಲೆ ಹರಿಹರ ಗ್ರಾಮಾಂತರ ಠಾಣೆ ಅಧಿಕಾರಿ, ಸಿಬ್ಬಂದಿ ದಾಳಿ ಮಾಡಿ, ಐವರನ್ನು ಬಂಧಿಸಿ, ₹3050 ಜಪ್ತಿ ಮಾಡಿದ್ದಾರೆ. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾವಣಗೆರೆ ತಾ. ಕಾರಿಗನೂರು ಕ್ರಾಸ್ ಭದ್ರಾ ಕಾಲುವೆ ಸ್ಥಳದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದವರ ಮೇಲೆ ಹದಡಿ ಠಾಣೆ ಅಧಿಕಾರಿ, ಸಿಬ್ಬಂದಿ ತಂಡ ದಾಳಿ ಮಾಡಿ, ನಾಲ್ವರನ್ನು ವಶಕ್ಕೆ ಪಡೆದು, ₹3700 ಜಪ್ತಿ ಮಾಡಿದ್ದಾರೆ. ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಸಾಂದರ್ಭಿಕ ಚಿತ್ರ)