ಶಿವಮೊಗ್ಗ: ರಾಜ್ಯ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಭದ್ರಾ ಕಾಡಾ ಪ್ರಾಧಿಕಾರದ ಸವಲತ್ತುಗಳನ್ನು ಪ್ರತಿ ಮನೆ ಮನೆಗಳಿಗೆ ಮುಟ್ಟಿಸುವ ಜವಾಬ್ದಾರಿ ಸದಸ್ಯರು ಹೊರಬೇಕು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಕರೆ ನೀಡಿದರು.
ರಾಜ್ಯಾದ್ಯಂತ ಮಹಿಳೆಯರು, ಯುವಕರ ಬದುಕಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಇದಕ್ಕೆ ಪೂರಕವಾಗಿ ರಾಜ್ಯಸರ್ಕಾರ ಕೋಟ್ಯಾಂತರ ರು.ಗಳನ್ನು ಜನರಿಗಾಗಿ ವ್ಯಯಿಸುವ ಮೂಲಕ ಬಡವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಪ್ರಸ್ತುತ ಎರಡು ಜಿಲ್ಲೆಗಳ ಸಹಭಾಗಿತ್ವದಲ್ಲಿ ಆಯೋಜಿಸಿರುವ ಸಭೆಯಲ್ಲಿ ಗ್ಯಾರಂಟಿ ಪ್ರಾಧಿಕಾರದ ಸದಸ್ಯರುಗಳ ಸಹಕಾರ, ಸಲಹೆ ಹಾಗೂ ವಿಚಾರಗಳನ್ನು ತಿಳಿಸಿದರೆ ಸರ್ಕಾರದ ಮಟ್ಟದಲ್ಲಿ ಧ್ವನಿಯಾಗಿ ತಾವು ಸೇರಿದಂತೆ ಗ್ಯಾರಂಟಿ ಅಧ್ಯಕ್ಷರು ಕೆಲಸ ಮಾಡಲಿದ್ದು, ಮುಕ್ತವಾಗಿ ಚರ್ಚಿಸಲು ಮುಂದಾಗಬೇಕು ಎಂದರು.ಭದ್ರಾ ಕಾಡಾ ಪ್ರಾಧಿಕಾರದಿಂದ ರೈತರಿಗೆ ಅನೇಕ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಹೆಚ್ಚು ನೀರು ಬಳಕೆಯಿಂದ ಭೂಮಿ ಹದಗೆಡುವ ಸಾಧ್ಯತೆಯಿದ್ದು ಹೀಗಾಗಿ ನಿಯಮಿತ ನೀರಿನ ಬಳಸಿಕೊಂಡು ಭೂಮಿ ಫಲವವತ್ತೆಯಿಂದ ಕೂಡಿರಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕೃಷಿ ಬೆಳೆಗಳ ಅಧಿಕ ಇಳುವರಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಅಕ್ಕಿ ವಿತರಿಸಿದ್ದು ಮುಂದಿನ ದಿನಗಳಲ್ಲಿ ಹೊಸದಾಗಿ ಆಹಾರ ಕಿಟ್‌ಗಳನ್ನು ವಿತರಿಸುವ ಗುರಿ ಹೊಂದಿದೆ. ಸರ್ಕಾರಿ ನೌಕರರ ಏಳನೇ ವೇತನ ಆಯೋಗ ಜಾರಿಗೊಳಿಸಿ ವಿಶ್ವಾಸ ಹಾಗೂ ನಂಬಿಕೆಗೆ ಅರ್ಹವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನ೦ದಸ್ವಾಮಿ ಮಾತನಾಡಿ, ಪಂಚ ನದಿಗಳ ಉಗಮ ಸ್ಥಾನವಾದ ಜಿಲ್ಲೆಗೆ ವಿಶೇಷ ಗೌರವಿದೆ. ಅಲ್ಲದೇ ಜಿಲ್ಲೆಯಿಂದ ಹರಿಯುವ ನೀರು ಶಿವಮೊಗ್ಗದತ್ತ ಸಾಗಿ ಲಕ್ಷಾಂತರ ಮಂದಿಗೆ ಕುಡಿಯುವ ನೀರಾಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಂಡು ಶೇ.98.5 ರಷ್ಟು ಪ್ರಗತಿ ಸಾಧಿಸಿ, ಕೋಟ್ಯಾಂತರ ಹಣವನ್ನು ರಾಜ್ಯಸರ್ಕಾರ ಜಿಲ್ಲೆಗೆ ಭರಿಸಿದೆ. ಅಲ್ಲದೇ ಉದ್ಯೋಗ ಮೇಳ ನಡೆಸಿ ಶೇ.90 ರಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.