ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಒತ್ತಾಯ

KannadaprabhaNewsNetwork |  
Published : Jun 23, 2025, 12:33 AM IST
ಸಂಡೂರಿನಲ್ಲಿ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸರ್ವೇ ಇಲಾಖೆಯ ಸೂಪರ್‌ವೈಸರ್ ಅನಿಲ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸರ್ವೆ ಇಲಾಖೆಯ ಎಲ್ಲ ಕೆಲಸಗಳನ್ನು ಮಾಡುತ್ತಿರುವ ಸರ್ಕಾರಿ ಪರವಾನಗಿ ಭೂಮಾಪಕರಿಗೆ ಸರ್ಕಾರಿ ಭೂಮಾಪಕರಂತೆ ಸಮಾನ ಕೆಲಸಕ್ಕೆ ಸಮಾನ ವೇತನ, ಸಮಾನ ಸೌಲಭ್ಯಗಳನ್ನು ಒದಗಿಸಬೇಕು.

ಸಂಡೂರಿನಲ್ಲಿ ಭೂಮಾಪಕರ ಸಂಘದಿಂದ ಸರ್ಕಾರಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಸಂಡೂರು

ಸರ್ವೆ ಇಲಾಖೆಯ ಎಲ್ಲ ಕೆಲಸಗಳನ್ನು ಮಾಡುತ್ತಿರುವ ಸರ್ಕಾರಿ ಪರವಾನಗಿ ಭೂಮಾಪಕರಿಗೆ ಸರ್ಕಾರಿ ಭೂಮಾಪಕರಂತೆ ಸಮಾನ ಕೆಲಸಕ್ಕೆ ಸಮಾನ ವೇತನ, ಸಮಾನ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲಿಯವರೆಗೆ ತಮ್ಮ ಲಾಗಿನ್‌ಗಳನ್ನು ಸ್ಥಗಿತಗೊಳಿಸುವಂತೆ (ಡಿ ಆ್ಯಕ್ಟಿವೇಟ್) ಒತ್ತಾಯಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ತಾಲೂಕು ಘಟಕದ ಸದಸ್ಯರು ಗುರುವಾರ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಸರ್ವೆ ಇಲಾಖೆಯ ಸೂಪರ್‌ವೈಸರ್ ಅನಿಲ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹನುಮಂತಪ್ಪ, ಪೋಡಿ ೧೧ಇ ಕೆಲಸಕ್ಕೆಂದು ನಮ್ಮನ್ನು ನಿಯೋಜನೆ ಮಾಡಿಕೊಂಡು, ನಂತರದಲ್ಲಿ ಸರ್ಕಾರಿ ಭೂಮಾಪಕರು ಮಾಡುವ ಎಲ್ಲ ಕೆಲಸಗಳನ್ನು ನಮ್ಮಿಂದ ಪಡೆದುಕೊಳ್ಳುತ್ತಿದ್ದೀರಿ. ಇಲಾಖೆಯ ಸೂಚನೆಗಳಿಗೆ ಗೌರವ ಕೊಟ್ಟು, ತಾವು ಸೂಚಿಸುವ ಭೂಮಾಪನಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಅಳತೆ ಕೆಲಸಕ್ಕೆ, ನೋಟಿಸ್ ನೀಡಲು ಒಬ್ಬ ಜವಾನರನ್ನು ಇಲಾಖೆ ನೀಡಿಲ್ಲ. ಅರ್ಜಿದಾರರು, ರೈತರು ಅಳತೆಗೆ ಸಹಾಯಕರೊಂದಿಗೆ ಬನ್ನಿ. ಇಲ್ಲದಿದ್ದರೆ, ನೀವು ಸರ್ವೇಯರ್‌ಗಳೇ ಅಲ್ಲ ಎಂದು ನಿಂದಿಸುತ್ತಾರೆ. ಹೀಗಾಗಿ ನಾವೇ ಸಹಾಯಕರನ್ನು ಹೊಂದಿಸಿಕೊಂಡು ಹೋಗುತ್ತಿದ್ದೇವೆ. ಸಹಾಯಕರಿಗೆ ನಾವೇ ₹೫೦೦ರಿಂದ ₹೮೦೦ರ ವರೆಗೆ ಕೊಡುತ್ತಿದ್ದೇವೆ ಎಂದು ಹೇಳಿದರು. ಎಷ್ಟೇ ಕೆಲಸ ಮಾಡಿದರೂ ಪರವಾನಗಿ ಭೂಮಾಪಕರಿಗೆ ಸಿಗುವುದು ಮಾಸಿಕ ₹೮೦೦೦ದಿಂದ ₹೨೦೦೦೦. ಅದೇ ಸರ್ಕಾರಿ ಭೂಮಾಪಕರು ಮಾಸಿಕ ₹೫೦ರಿಂದ ₹೬೦ ಸಾವಿರಕ್ಕೂ ಹೆಚ್ಚು ಸಂಬಳ, ಇನ್ನಿತರ ಸೌಲಭ್ಯಗಳನ್ನು ಪಡೆಯುತ್ತಾರೆ. ಸರ್ಕಾರಿ ಭೂಮಾಪಕರಷ್ಟೇ ಕೆಲಸ ಮಾಡುವ ಪರವಾನಗಿ ಭೂಮಾಪಕರು ಇಂತಹ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಮಗೆ ಕನಿಷ್ಠ ಸವಲತ್ತುಗಳನ್ನು ಸಹ ಒದಗಿಸಿಲ್ಲ. ನಾವು ಇಲಾಖೆ ಸೂಚಿಸುವ ಕೆಲಸಗಳನ್ನು ಮಾಡಲು ಸಿದ್ಧರಿದ್ದೇವೆ. ಸರ್ಕಾರಿ ಭೂಮಾಪಕರಿಗೆ ನೀಡುವ ವೇತನ, ಇನ್ನಿತರ ಸೌಲಭ್ಯಗಳನ್ನು ಪರವಾನಗಿ ಭೂಮಾಪಕರಿಗೂ ಕೊಡಬೇಕು. ಅಲ್ಲಿಯವರೆಗೆ ನಮ್ಮ ಕೆಲಸವನ್ನು ಸ್ಥಗಿತಗೊಳಿಸಲು ಅನುವು ಮಾಡಿಕೊಟ್ಟು, ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಕೆಂಚ ಲಿಂಗಪ್ಪ, ಸದಸ್ಯರಾದ ಕುವೆಂಪು, ವೀರೇಶ್‌ಗೌಡ, ರಮೇಶ್‌ಗೌಡ, ಎಚ್.ಎಂ. ಶಿವಮೂರ್ತಿಸ್ವಾಮಿ, ರಾಜು ಹಟ್ಟಿ, ಹರಿಶಂಕರ, ಮಹಾಂತೇಶ, ಇಸ್ಮಾಯಿಲ್, ಮುತ್ತುರಾಜ್ ಬಣಕಾರ, ದಿನೇಶ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ