ಕೈಗಾ ಅಣುಸ್ಥಾವರದ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ. 50 ಮೀಸಲಾತಿಗೆ ಆಗ್ರಹ

KannadaprabhaNewsNetwork |  
Published : Nov 05, 2026, 02:15 AM IST
ಜಿಲ್ಲಾಡಳಿತದ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕದ್ರಾ ಅಣೆಕಟ್ಟು ನಿರ್ಮಾಣದಿಂದ ಈ ಎರಡು ಗ್ರಾಮಗಳ ಅನೇಕ ಕುಟುಂಬಗಳು ತಮ್ಮ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡಿವೆ. ಆದರೆ, ಇಂದಿಗೂ ಸೂಕ್ತ ಉದ್ಯೋಗ ಮತ್ತು ಪುನರ್ವಸತಿ ಸೌಲಭ್ಯ ದೊರೆಯದೆ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.

ಕಾರವಾರ: ಕದ್ರಾ ಜಲಾಶಯ ಹಾಗೂ ಕೈಗಾ ಅಣುಸ್ಥಾವರ ಯೋಜನೆಗಳಿಂದ ಭೂಮಿ ಮತ್ತು ಮನೆಗಳನ್ನು ಕಳೆದುಕೊಂಡಿರುವ ಹರ್ಟುಗಾ ಹಾಗೂ ಕುಚೇಗಾರ ಗ್ರಾಮಸ್ಥರಿಗೆ ಸೂಕ್ತ ಪುನರ್ವಸತಿ, ಉದ್ಯೋಗ ಮತ್ತು ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಕೈಗಾ ಅಣುಸ್ಥಾವರದ ಮುಂದಿನ ನೇಮಕಾತಿಯಲ್ಲಿ ಸ್ಥಳೀಯರಿಗೆ ಶೇ. 50ರಷ್ಟು ಉದ್ಯೋಗ ಮೀಸಲಿಡಬೇಕು ಎಂದು ಆಗ್ರಹಿಸಿದ್ದಾರೆ.ಈ ಸಂಬಂಧ ಹರ್ಟುಗಾ ಹಾಗೂ ಕುಚೇಗಾರ ಊರಿನ ಅಭಿವೃದ್ಧಿ ಸೇವಾ ಸಮಿತಿ ವತಿಯಿಂದ ಬುಧವಾರ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕದ್ರಾ ಅಣೆಕಟ್ಟು ನಿರ್ಮಾಣದಿಂದ ಈ ಎರಡು ಗ್ರಾಮಗಳ ಅನೇಕ ಕುಟುಂಬಗಳು ತಮ್ಮ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡಿವೆ. ಆದರೆ, ಇಂದಿಗೂ ಸೂಕ್ತ ಉದ್ಯೋಗ ಮತ್ತು ಪುನರ್ವಸತಿ ಸೌಲಭ್ಯ ದೊರೆಯದೆ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಕೈಗಾ ಅಣುಸ್ಥಾವರವು ಈ ಗ್ರಾಮಗಳಿಗೆ ಅತ್ಯಂತ ಸಮೀಪದಲ್ಲಿದ್ದು, ಈಗಾಗಲೇ 1ರಿಂದ 4ನೇ ಘಟಕಗಳು ವಿದ್ಯುತ್ ಉತ್ಪಾದನೆ ಆರಂಭಿಸಿವೆ. 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಸ್ಥಾವರದ ಸಮೀಪದಲ್ಲೇ ವಾಸಿಸುತ್ತಿರುವ ಸ್ಥಳೀಯರಿಗೆ ಕಾಯಂ ಉದ್ಯೋಗ ದೊರೆಯದಿರುವುದು ಬೇಸರದ ಸಂಗತಿಯಾಗಿದೆ. ಗ್ರಾಮಗಳಲ್ಲಿನ ವಿದ್ಯಾವಂತ ಯುವಕರು ಉದ್ಯೋಗವಿಲ್ಲದೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸ್ಥಳೀಯರಿಗೆ ಅವಕಾಶ ಕಲ್ಪಿಸದೆ ಹೊರರಾಜ್ಯದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಭೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಹಾಗೂ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಕೈಗಾ ಅಣುಸ್ಥಾವರದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ವಿದ್ಯಾರ್ಹತೆಯ ಆಧಾರದ ಮೇಲೆ ಉದ್ಯೋಗ ನೇಮಕಾತಿ ನಡೆದರೂ, ಅದರಲ್ಲಿ ಶೇ. 50ರಷ್ಟು ಹುದ್ದೆಗಳನ್ನು ಹರ್ಟುಗಾ ಹಾಗೂ ಕುಚೇಗಾರ ಗ್ರಾಮದ ಅರ್ಹ ಅಭ್ಯರ್ಥಿಗಳಿಗೆ ಮೀಸಲಿಡಬೇಕು ಮತ್ತು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಅಣುಸ್ಥಾವರದ ಯಾವುದೇ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಕಂಪನಿಗಳು ಉದ್ಯೋಗ ನೇಮಕಾತಿ ನಡೆಸುವ ಸಂದರ್ಭದಲ್ಲಿ ಮೊದಲು ಅಭಿವೃದ್ಧಿ ಸೇವಾ ಸಮಿತಿಗೆ ಮಾಹಿತಿ ನೀಡಬೇಕು. ಸ್ಥಳೀಯ ಗ್ರಾಮಸ್ಥರಿಗೆ ಉದ್ಯೋಗಾವಕಾಶ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಎಲ್ಲ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಶೀಘ್ರ ಸಭೆ ನಡೆಸಿ, ಬೇಡಿಕೆಗಳನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಮಿತಿ ಆಗ್ರಹಿಸಿದೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಮಹಾಬಲೇಶ್ವರ ಭಟ್, ಫ್ರಾನ್ಸಿಸ್ ರೋಡ್ರಿಗಿಸ್, ರಾಜೇಶ್ ದೇವಳಿ, ರಾಘವೇಂದ್ರ ಹೆಗಡೆ, ಸಂತೋಷ್ ಗೌಡ, ಪ್ರಕಾಶ್ ಜಿ. ಬಾಂದೇಕರ್, ರಾಮ ಎಂ. ಗೌಡ, ಗಜಾನನ ಗೌಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ