ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹ

KannadaprabhaNewsNetwork |  
Published : May 22, 2026, 02:15 AM IST
ಗ್ರಾಮಸ್ಥರು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ತೆರಳಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ತರಂಗಮೇಟ್ ಪ್ರದೇಶದಲ್ಲಿ ತೀವ್ರಗೊಂಡಿರುವ ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಾಗೂ ಅರ್ಧಕ್ಕೆ ನಿಂತಿರುವ ತಡೆಗೋಡೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ತಡೆಗೋಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯ । ಹಾರವಾಡ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿಕನ್ನಡಪ್ರಭ ವಾರ್ತೆ ಕಾರವಾರ

ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ತರಂಗಮೇಟ್ ಪ್ರದೇಶದಲ್ಲಿ ತೀವ್ರಗೊಂಡಿರುವ ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಾಗೂ ಅರ್ಧಕ್ಕೆ ನಿಂತಿರುವ ತಡೆಗೋಡೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

2024ನೇ ಸಾಲಿನಲ್ಲಿ ಉಂಟಾದ ಭಾರಿ ಕಡಲಕೊರೆತದಿಂದಾಗಿ ತರಂಗಮೇಟ್ ಪ್ರದೇಶದ ಸುಮಾರು 500 ಮೀಟರ್ ಭಾಗ ತೀವ್ರ ಹಾನಿಗೊಳಗಾಗಿದೆ. ಬರೋಬ್ಬರಿ 100ರಿಂದ 200 ತೆಂಗಿನ ಮರಗಳು ಹಾಗೂ 1 ರಿಂದ 2 ಎಕರೆಗೂ ಅಧಿಕ ಭೂಮಿ ಕಣ್ಣೆದುರೇ ಸಮುದ್ರದ ಪಾಲಾಗಿದೆ. ಹಲವು ಮನೆಗಳಿಗೆ ಹಾನಿಯಾಗಿದ್ದು, ಪ್ರಸ್ತುತ 20 ರಿಂದ 30 ಕುಟುಂಬಗಳು ಪ್ರತಿನಿತ್ಯ ಅಪಾಯದ ಅಂಚಿನಲ್ಲಿಯೇ ಬದುಕು ಸವೆಸುವಂತಹ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕಡಲಕೊರೆತ ತಡೆಯಲು ಸುಮಾರು 180 ಮೀಟರ್ ಉದ್ದದ ತಡೆಗೋಡೆ ಕಾಮಗಾರಿ ಆರಂಭಿಸಲಾಗಿತ್ತಾದರೂ, ಅದನ್ನು ಅಪೂರ್ಣವಾಗಿ ಹಾಗೆಯೇ ಬಿಡಲಾಗಿದೆ. ಉಳಿದ ಭಾಗಗಳಲ್ಲಿ ಮಣ್ಣು ಭರ್ತಿ ಮಾಡದೆ ಖಾಲಿ ಜಾಗ ಉಳಿದುಕೊಂಡಿದೆ. ಇದರಿಂದ ಮುಂಬರುವ ಮಳೆಗಾಲದಲ್ಲಿ ಮಳೆಯ ನೀರು ತುಂಬಿ, ಸಮುದ್ರದ ಅಲೆಗಳು ಮತ್ತಷ್ಟು ವೇಗವಾಗಿ ಊರೊಳಗೆ ನುಗ್ಗುವ ಭೀತಿ ಎದುರಾಗಿದೆ. ಅಷ್ಟೇ ಅಲ್ಲದೇ, ರಭಸದ ಅಲೆಗಳಿಂದಾಗಿ ಈಗಾಲೇ ನಿರ್ಮಿಸಿರುವ ತಡೆಗೋಡೆಗೂ ಹಾನಿಯಾಗುವ ಅಪಾಯವಿದೆ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಹಲವು ವರ್ಷಗಳಿಂದ ಕಡಲಕೊರೆತದಿಂದ ನಾವು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಬೇಕು. ಅಪೂರ್ಣವಾಗಿರುವ ತಡೆಗೋಡೆ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಿ, ಕಡಲಕೊರೆತಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು.

ಜೊತೆಗೆ, ಕಡಲಕೊರೆತದಿಂದ ಈಗಾಗಲೇ ಮನೆ ಹಾಗೂ ಜಮೀನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಅಪಾಯದ ಅಂಚಿನಲ್ಲಿರುವ ಸುಮಾರು 20-30 ಕುಟುಂಬಗಳಿಗೆ ವಾಸಿಸಲು ಸುರಕ್ಷಿತ ಜಮೀನು ಮಂಜೂರು ಮಾಡುವ ಮೂಲಕ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭ ತಾಕು ಪೊಕ್ಕು ಹರಿಕಂತ್ರ, ಗಣಪತಿ ಚಿಕ್ಕಾ ದುರ್ಗೇಕರ್, ರಮೇಶ ಹಾಕ್ಕು, ರವಿ ಗೋವಿಂದ ಹರಿಕಂತ್ರ, ರಾಜು ಜನಾರ್ದನ ತಾಂಡೇಲ ಸೇರಿದಂತೆ ಇತರ ಗ್ರಾಮಸ್ಥರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೃದ್ಯ ಪುಸ್ತಕ ಪ್ರೀತಿ ಬೆಳೆಸಿ ಪುಸ್ತಕ ಸಂಸ್ಕೃತಿ ಬೆಳೆಸಿ ಉತ್ತೇಜಿಸುವ ಅಗತ್ಯವಿದೆ
ಬಂಗಾರಪ್ಪ ನಗರ, ಗಾಂಧಿನಗರ ನಿವಾಸಿಗಳ ಮನೆಗಳ ತೆರವಿಗೆ ತಡೆ