ಕಾರಟಗಿ: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ತಾಲೂಕು ಘಟಕದಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ವಿರೋಧಿಸಿ ಪಂಜಿನ ಮೆರವಣಿಗೆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಯಿತು.
ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿ ಪರೀಕ್ಷೆ ಬರೆಯುವುದರ ಹಿಂದೆ ಮಕ್ಕಳ ಅಪಾರ ಶ್ರಮವಿರುತ್ತದೆ. ಒಂದು ಬಾರಿ ಬರೆಯುವುದೇ ಕಷ್ಟ. ಕೆಲವರು ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಎರಡು ವರ್ಷಗಳಿಂದ ತರಬೇತಿ ಪಡೆದಿರುತ್ತಾರೆ. ಪರೀಕ್ಷೆ ಬರೆಯುವವರಿಗಷ್ಟೇ ಆ ಕಷ್ಟ ಗೊತ್ತು. ಹಿಂದಿನ ಬೆಂಚಿನ ವಿದ್ಯಾರ್ಥಿಯನ್ನು ವಾಮಮಾರ್ಗದಲ್ಲಿ ಪಾಸ್ ಮಾಡಿದರೆ ಕಷ್ಟಪಟ್ಟು ಓದಿದ ಪ್ರತಿಭಾವಂತ ಮಕ್ಕಳ ಗತಿ ಏನು ಎಂದು ಕೇಳಿದರು.
ನೀಟ್ ಪರೀಕ್ಷಾ ಅಕ್ರಮಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್ ಮಾತನಾಡಿ, ಈ ವರ್ಷ ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ನೀಟ್ ರದ್ದುಗೊಳಿಸಿರುವುದರಿಂದ ಈ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನೀಟ್ ಅಕ್ರಮಕ್ಕೆ ಕೇಂದ್ರವೇ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯ ಸೋಮನಾಥ್ ದೊಡ್ಡಮನಿ, ಎನ್ಎಸ್ಯುಐ ಜಿಲ್ಲಾ ಕಾರ್ಯದರ್ಶಿ ಮಹೇಶ್ ಭೋವಿ, ಕನಕಗಿರಿ ಯುವ ಕಾಂಗ್ರೆಸ್ ಅಧ್ಯಕ್ಷ ದೇವರಾಜ್ ಕಟ್ಟಿಮನಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಚಂದ್ರಶೇಖರ ಉಪ್ಪಾರ, ಯುವ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಚಿನ್ಮಯ್,ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ, ಎನ್ಎಸ್ಯುಐ ತಾಲೂಕಾಧ್ಯಕ್ಷ ಅಂಕಿತ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ನಾಗರಾಜ್, ವಿನೋದಗೌಡ, ಚಂದ್ರು ಕುಂಬಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.