ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿದ್ದು, ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ಲೋಕಾಯುಕ್ತರು ಪ್ರಕರಣ ದಾಖಲು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಳುಗಡೆ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ, ನಿವೇಶನ ಹಂಚಿಕೆ ಆಗಿಲ್ಲ. ಇಲ್ಲಿ ಕೇವಲ ಹಣದ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಬಿಟಿಡಿಎಯಲ್ಲಿ ಕೆಲವರು ಶಾಸಕರ ಏಜೆಂಟ್ ರಾಗಿ ಕೆಲಸ ಮಾಡುತ್ತಿದ್ದು, ಸಂತ್ರಸ್ತರಿಗೆ ನ್ಯಾಯ ಕೊಡಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆಪಾದಿಸಿದರು.ಈಗಾಗಲೇ ಬಿಟಿಡಿಎ ಪ್ರಕರಣಗಳ ಬಗ್ಗೆ ತನಿಖೆ ಮಾಡಲು ಪ್ರಕರಣ ದಾಖಲಿಸುವಂತೆ ಲೋಕಾಯುಕ್ತರಿಗೆ ಮನವಿ ಕೊಟ್ಟರು ಯಾವುದೇ ಪ್ರಕರಣಗಳು ದಾಖಲು ಆಗಿರುವುದಿಲ್ಲ. ತಕ್ಷಣವೇ ಲೋಕಾಯುಕ್ತ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಧ್ಯಕ್ಷರಾದ ಪರಶುರಾಮ ನೀಲನಾಯಕ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬಿಟಿಡಿಎ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕಲು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನಿರ್ಧಾರ ಮಾಡಿದ ಹಿನ್ನೆಲೆಯಲ್ಲಿ ಜೂ.18ರಿಂದ ಬೆಳಗ್ಗೆ 6 ಗಂಟೆಯಿಂದ ಜೂ.19ಬೆಳಗ್ಗೆ 6 ಗಂಟೆವರೆಗೆ ಲೋಕಾಯುಕ್ತ ಕಚೇರಿ ಸುತ್ತಮುತ್ತ 100 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಲೋಕಾಯುಕ್ತ ಕಚೇರಿ ಎದುರು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.