ಕನ್ನಡಪ್ರಭ ವಾರ್ತೆ ಭಟ್ಕಳ
ಬಂದರು ರಸ್ತೆಯಲ್ಲಿ ಬಾವುಟ ತೆರವುಗೊಳಿಸಿದ ಬಳಿಕ, ಕೆಲ ಕಿಡಿಗೇಡಿಗಳು ಮತ್ತೆ ಅದೇ ಸ್ಥಳದಲ್ಲಿ ಕಾನೂನು ಮೀರಿ ಬಾವುಟ ಹಾರಿಸಿರುವುದರಿಂದ ಕೆಲ ಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಪೊಲೀಸರು ಜನರನ್ನು ಸಮಾಧಾನಗೊಳಿಸಿ, ಎರಡನೇ ಬಾರಿ ಹಾಕಿದ್ದ ಬಾವುಟವನ್ನು ಸಹ ತೆರವುಗೊಳಿಸಿದ್ದರು. ಬಾವುಟವನ್ನು ತೆಗೆದ ಸಂಬಂಧ ಗುಂಪು ಸೇರಿ, ಉದ್ವಿಘ್ನತೆಯನ್ನು ಉಂಟು ಮಾಡಿದ ಕಿಡಿಗೇಡಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭ ಆಯುಕ್ತರು ಲಭ್ಯವಿಲ್ಲದ ಕಾರಣ ಅವರ ಅನುಪಸ್ಥಿತಿಯಲ್ಲಿ ಕಚೇರಿಯ ವ್ಯವಸ್ಥಾಪಕ ವೆಂಕಟೇಶ ನಾಯ್ಕ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಜಾಲಿಯ ದೇವಿನಗರದ ನಾಮಫಲಕ ವಿಚಾರದಲ್ಲಿ ಕಾರ್ಯಕರ್ತರ ಮೇಲೆ ಮೊಕದ್ದಮೆ ದಾಖಲಿಸಿದ್ದನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಮುಖಂಡರು ಇದೇ ರೀತಿಯ ಕ್ರಮವನ್ನು ಈ ಪ್ರಕರಣದಲ್ಲೂ ಅನುಸರಿಸಬೇಕು ಎಂದು ಒತ್ತಾಯಿಸಿದರು.ಒಬ್ಬರಿಗೊಂದು ಇನ್ನೊಬ್ಬರಿಗೊಂದು ಎನ್ನುವ ಧೋರಣೆ ಸರಿಯಲ್ಲ, ಅಂದು ಕೈಗೊಂಡ ಕ್ರಮಕ್ಕೆ ಇಲ್ಲಿಯೂ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಜಯಂತ ನಾಯ್ಕ, ಸಹಸಂಚಾಲಕ ನಾಗೇಶ ಹೊನ್ನೆಗದ್ದೆ, ಕುಮಾರ ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ, ನಾಗೇಂದ್ರ ನಾಯ್ಕ, ರಾಜೇಂದ್ರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.