ನರೇಗಾದಲ್ಲಿ ಹೆಚ್ಚುವರಿ 50 ದಿನ ಕೆಲಸ ನೀಡುವಂತೆ ಆಗ್ರಹ

KannadaprabhaNewsNetwork |  
Published : Mar 02, 2024, 01:50 AM IST
1ಎಚ್‌ವಿಆರ್‌1 | Kannada Prabha

ಸಾರಾಂಶ

ಕೈಗಾರಿಕೋದ್ಯಮಿಗಳಿಗೆ ರಾತ್ರೋರಾತ್ರಿ ಭೂಮಿ ಮಂಜೂರು ಮಾಡುವ ಸರ್ಕಾರಗಳು ಬಡವರಿಗೆ ತುಂಡು ಭೂಮಿ ಕೊಡಲು ಮೀನಮೇಷ ಎಣಿಸುತ್ತಿವೆ

ಹಾವೇರಿ: ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ ಹೆಚ್ಚುವರಿ 50 ದಿನಗಳ ಕೆಲಸವನ್ನು ಕೂಡಲೇ ನೀಡಬೇಕು ಹಾಗೂ ಜನರ ಜ್ವಲಂತ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್‌ಯುಸಿಐ–ಸಿ) ಪಕ್ಷದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಯುಸಿಐ- ಕಮ್ಯುನಿಸ್ಟ್ ಪಕ್ಷದ ಮುಖಂಡ ಗಂಗಾಧರ ಬಡಿಗೇರ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಕಡೆ ಈಗಾಗಲೇ ನರೇಗಾ ಯೋಜನೆ ಅಡಿ 100 ದಿನಗಳ ಕೆಲಸ ಮುಗಿಸಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಹೆಚ್ಚುವರಿ 50 ದಿನಗಳ ಕೆಲಸ ನೀಡಬೇಕಾದ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ. ಕೂಲಿ ಕೆಲಸವಿಲ್ಲದೆ ಕೃಷಿ ಕಾರ್ಮಿಕರು ಗುಳೆ ಹೋಗುವಂತಾಗಿದೆ. ಸರ್ಕಾರ ಕೂಡಲೇ 50 ದಿನಗಳ ಹೆಚ್ಚುವರಿ ಕೆಲಸ ನೀಡಬೇಕೆಂದು ಆಗ್ರಹಿಸಿದರು.

ರೈತರ ಬದುಕು ತೀವ್ರ ಸಂಕಷ್ಟದಿಂದ ಕೂಡಿದೆ. ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ವಾಗ್ದಾನ ನೀಡಿದ್ದ ಕೇಂದ್ರ ಸರ್ಕಾರ ದೆಹಲಿ ಹೋರಾಟ ನಡೆದು ಎರಡು ವರ್ಷಗಳ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದ ಬಗರ್ ಹುಕುಂ ಸಾಗುವಳಿದಾರರು ಭೂಮಿಯ ಹಕ್ಕುಪತ್ರಗಳಿಗಾಗಿ ಸತತವಾಗಿ ಹೋರಾಡುತ್ತಿದ್ದಾರೆ. ಕೈಗಾರಿಕೋದ್ಯಮಿಗಳಿಗೆ ರಾತ್ರೋರಾತ್ರಿ ಭೂಮಿ ಮಂಜೂರು ಮಾಡುವ ಸರ್ಕಾರಗಳು ಬಡವರಿಗೆ ತುಂಡು ಭೂಮಿ ಕೊಡಲು ಮೀನಮೇಷ ಎಣಿಸುತ್ತಿವೆ ಎಂದು ದೂರಿದರು.

ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ದನಕರುಗಳಿಗೆ ಮೇವು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ವಿವಿಧ ಬರ ಪರಿಹಾರ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಮಾಶಾಸನ ಸೇರಿದಂತೆ ವಿವಿಧ ಪಿಂಚಣಿಗಳನ್ನು ಸಮರ್ಪಕವಾಗಿ, ನಿಯಮಿತವಾಗಿ ಬಿಡುಗಡೆ ಮಾಡಬೇಕು. ಜಿಲ್ಲಾಸ್ಪತ್ರೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಮೂಲಸೌಕರ್ಯ ಒದಗಿಸಿ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಳಿಕ ಜಿಲ್ಲಾಧಿಕಾರಿಗೆ ಹಾಗೂ ನರೇಗಾ ಯೋಜನೆಗೆ ಸಂಬಂಧಪಟ್ಟಂತೆ ಮುಖ್ಯ ಯೋಜನಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಎಸ್‌ಯುಸಿಐ-ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ, ರಾಜು ಆಲದಹಳ್ಳಿ, ಗಣೇಶಪ್ಪ ನಾಗಣಗೌಡರ, ನೀಲಮ್ಮ ಕೊರವರ್, ಚಂದ್ರಣ್ಣ ಕಜ್ಜೇರ್, ಮೌಲಾಲಿ ಚಿಕ್ಕಳ್ಳಿ, ಅಂಜಿನಪ್ಪ ಹಾದಿಮನಿ, ಕುಬೇರಪ್ಪ ಹೊಸಮನಿ, ಹನುಮಂತ ತಳವಾರ್, ಮಂಜಪ್ಪ ಹಿರೇಕೌನ್ಸಿ ಇತರರು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು