ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

KannadaprabhaNewsNetwork | Published : Mar 2, 2024 1:50 AM

ಸಾರಾಂಶ

ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂವಿಧಾನ ದಾರಿದೀಪವಾಗಿದೆ, ಅದರಡಿ ರಚಿತವಾದ ಕಾನೂನುಗಳನ್ನು ಪ್ರತಿಯೊಬ್ಬರೂ ಪಾಲಿಸುವುದು ಕಡ್ಡಾಯವಾಗಿದ್ದು, ಬಾಲ್ಯವಿವಾಹ ಹಾಗೂ ಚಿಕ್ಕವಯಸ್ಸಿನಲ್ಲಿ ದುಡಿಮೆಗೆ ಕಳುಹಿಸುವುದು, ಮಕ್ಕಳ ಮೇಲೆ ದೌರ್ಜನ್ಯ ಅಪರಾಧ

ಕನ್ನಡಪ್ರಭ ವಾರ್ತೆ ಕೋಲಾರ

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಅವರು ಸಮಾಜದಲ್ಲಿ ಉತ್ತಮ ಬದುಕು ಸಾಗಿಸಲು ನೆರವಾಗಿ, ಬಾಲ್ಯವಿವಾಹ ಮಾಡಿ ಅವರನ್ನು ಸಂಕಷ್ಟಕ್ಕೆ ನೂಕಿ ನೀವು ಶಿಕ್ಷೆಗೆ ಒಳಗಾಗದಿರಿ ಎಂದು ಪೋಷಕರಿಗೆ ಮಕ್ಕಳು ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಕಿವಿಮಾತು ಹೇಳಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾಮಟ್ಟದ ಮಕ್ಕಳ ಹಬ್ಬದಲ್ಲಿ ಮಕ್ಕಳಿಗೆ ಕಾನೂನು ಅರಿವು ನೀಡಿ ಮಾತನಾಡಿ, ಮಕ್ಕಳಿಗೆ ಬದುಕುವ ಹಕ್ಕು, ಶಿಕ್ಷಣ, ಆರೋಗ್ಯದ ಹಕ್ಕು ಪೌಷ್ಟಿಕ ಆಹಾರದ ಹಕ್ಕು ನೀಡಲಾಗಿದೆ, ಅಭಿವೃದ್ದಿ ಹೊಂದುವ ಮತ್ತು ಭಾಗವಹಿಸುವ ಹಕ್ಕು ಇದೆ ಎಂದರು. ಸಹಾಯವಾಣಿಗೆ ಕರೆ ಮಾಡಿ

ಭೇಟಿ ಬಚಾವೋಮ ಬೇಟಿ ಪಡಾವೋ ಅಂಗವಾಗಿ ಹೆಣ್ಣು ಭ್ರೂಣ ಹತ್ಯೆ ತಡೆ, ಲಿಂಗ ಪತ್ತೆ ನಿಷೇಧ, ಬಾಲ್ಯವಿವಾಹ ನಿಷೇಧ, ಬಾಲ ಕಾರ್ಮಿಕ ತಡೆ ಕಾಯಿದೆ ಕುರಿತು ಮಾಹಿತಿ ನೀಡಿದರು. ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯವಿವಾಹ, ಬಾಲಕಾರ್ಮಿಕತೆ ಕಂಡು ಬಂದರೆ ಮಕ್ಕಳ ಸಹಾಯವಾಣಿ ೧೦೯೮ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ ೧೫೧೦೦ಕ್ಕೆ ಕರೆ ಮಾಡಿ ಎಂದು ಕಿವಿಮಾತು ಹೇಳಿದರು.ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂವಿಧಾನ ದಾರಿದೀಪವಾಗಿದೆ, ಅದರಡಿ ರಚಿತವಾದ ಕಾನೂನುಗಳನ್ನು ಪ್ರತಿಯೊಬ್ಬರೂ ಪಾಲಿಸುವುದು ಕಡ್ಡಾಯವಾಗಿದ್ದು, ಬಾಲ್ಯವಿವಾಹ ಹಾಗೂ ಚಿಕ್ಕವಯಸ್ಸಿನಲ್ಲಿ ದುಡಿಮೆಗೆ ಕಳುಹಿಸುವುದು, ಮಕ್ಕಳ ಮೇಲೆ ದೌರ್ಜನ್ಯ ಅಪರಾಧ ಎಂದು ತಿಳಿಸಿದರು.

ಶಿಕ್ಷಕರ ಸಹಕಾರ ಅಗತ್ಯ

ಬಾಲ್ಯವಿವಾಹ, ಬಾಲಕಾರ್ಮಿಕತೆ ಮೂಲಕ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುದನ್ನು ತಪ್ಪಿಸುವಲ್ಲಿ ಸಮುದಾಯ, ಶಿಕ್ಷಕರು ಸಹಕಾರ ನೀಡಬೇಕು, ಹೆಚ್ಚು ಪ್ರಚಾರ ಒದಗಿಸುವ ಮೂಲಕ ವಿದ್ಯಾರ್ಥಿಗಳೇ ಪೋಷಕರಿಗೆ ಈ ಕುರಿತು ಮಾರ್ಗದರ್ಶನ ನೀಡಬೇಕು. ಸ್ವಾತಂತ್ರ್ಯಕ್ಕೆ ಮುನ್ನಾ ಸಾಮಾನ್ಯವಾಗಿದ್ದ ಬಾಲ್ಯವಿವಾಹ ತಡೆಯಲು ಬಾಲಗಂಗಾಧರ ತಿಲಕ್ ರಂತಹ ಮಹನೀಯರು ಹೋರಾಟ ನಡೆಸಿದರು ಎಂದು ಸ್ಮರಿಸಿದ, ಅದರೆ ಇಂದು ಸರ್ಕಾರವಿದೆ, ಸಂವಿಧಾನ,ಕಾನೂನು ಇದ್ದು, ಬಾಲ್ಯವಿವಾಹ ಅಪರಾಧವೆಂದು ಹೇಳಲಾಗಿದೆ ಎಂದರು.ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಕರ್ನಾಟಕ ವಿಜ್ಞಾನ ಪರಿಷತ್ ಸದಸ್ಯೆ ಮಂಜುಳಾ ಭೀಮರಾವ್, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಎನ್.ನಾರಾಯಣಸ್ವಾಮಿ, ಇಲಾಖೆಯ ನಿರೂಪಣಾಧಿಕಾರಿ ವಂಶಿಕೃಷ್ಣ ಮತ್ತಿತರರು ಇದ್ದರು.

Share this article