ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಗ್ರಾಮಸ್ಥರು ಶನಿವಾರ ಬೆಳಗ್ಗೆ ಸೆಸ್ಕ್ ಕಚೇರಿ ಎದುರು ಸೇರಿ ಸಮರ್ಪಕವಾಗಿ ವಿದ್ಯುತ್ ಪೂರೈಸದ ಸೆಸ್ಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ರೈತರು ಹರಿಶಿನ, ಕಬ್ಬು, ಮಂಗಳೂರು ಸವತೆ ಬೆಳೆಗಳನ್ನು ಬೆಳೆಯುತ್ತಿದ್ದು, ನಾಲೆಯಲ್ಲಿ ನೀರಿಲ್ಲದ ಕಾರಣ ಪಂಪ್ ಸೆಟ್ ಗಳ ಆಶ್ರಯದಲ್ಲಿ ಬೆಳೆಗಳನ್ನು ಬೆಳೆಯ ಬೇಕಾಗಿದೆ. ಆದರೆ ಸೆಸ್ಕ್ ಅಧಿಕಾರಿಗಳು ದಿನಕ್ಕೆ ಕೇವಲ ಎರಡು ಗಂಟೆ ನೀರು ಬಿಡುತ್ತಿರುವುದರಿಂದ ಬೆಳೆಗಳಿಗೆ ನೀರಿಲ್ಲದಂತಾಗಿ ರೈತ ತೊಂದರೆಗೆ ಒಳಗಾಗುತ್ತಿದ್ದಾನೆ ಎಂದು ಆರೋಪಿಸಿದರು.ಚೆಸ್ಕಾಂ ಆಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಕಚೇರಿಯಲ್ಲಿ ಕಾರ್ಯನಿರತರಾಗಿದ್ದ ಜೂನಿಯರ್ ಇಂಜಿನಿಯರ್ ಸಿ. ಗೀತಾ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು.
ಆದರೆ ಇದನ್ನು ಒಪ್ಪದ ಗ್ರಾಮಸ್ಥರು, ಮೊದಲೆಲ್ಲ ಮೂಗೂರು ವಿಭಾಗದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಬೆಳಗ್ಗೆ 5 ಹಾಗೂ ರಾತ್ರಿ 2 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಟಿ. ನರಸೀಪುರ ವಿಭಾಗದಿಂದ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ತೀವ್ರವಾದ ಸಮಸ್ಯೆ ಎದುರಾಗಿದೆ. ಎರಡು ಗಂಟೆಗಳ ಕಾಲ ಮಾತ್ರವೇ ವಿದ್ಯುತ್ ಸರಬರಾಜಾಗುತ್ತಿದೆ. ಕೆಲವೊಮ್ಮೆ ಮೋಟಾರ್ ಚಾಲನೆ ಮಾಡಲು ಸಾಧ್ಯವಾಗದಷ್ಟು ವಿದ್ಯುತ್ ಸರಬರಾಜಾಗುತ್ತಿಲ್ಲ. ಹಾಗಾಗಿ ನಮಗೆ ಮತ್ತೆ ಮೂಗೂರು ವಿಭಾಗದಿಂದಲೇ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.
ಗ್ರಾಪಂ ಸದಸ್ಯ ರಘು, ಶಿವಸ್ವಾಮಿ, ರಾಜೇಂದ್ರ, ಗುರು ಬಸವನಾಯಕ, ಬಸವರಾಜು, ಪ್ರದೀಪ್, ಮಹದೇವಪ್ಪ, ಗುರುಸ್ವಾಮಿ, ಮಹೇಶ್ ಭಾಗವಹಿಸಿದ್ದರು.