ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳಿಗೆ ಪರಿಹಾರಕ್ಕೆ ಆಗ್ರಹ

KannadaprabhaNewsNetwork |  
Published : Aug 07, 2026, 02:00 AM IST
5ಕೆಎಂಎನ್‌ಡಿ-5ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಬಿ.ಹಟ್ನ ಗ್ರಾಮದ ರೈತ ದಂಪತಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಮೀಸೆ ಪುಟ್ಟಸ್ವಾಮಿ, ಪಾಂಡವಪುರ ತಾಲೂಕಿನ ಮಂಡಿಬೆಟ್ಟಹಳ್ಳಿಯ ಎಂ.ಎಸ್.ಮಂಜುನಾಥ್ ಸೇರಿದಂತೆ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಎಲ್ಲಾ ಸಾಲಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ತಾಲೂಕಿನ ಬಿ.ಹಟ್ನ ಗ್ರಾಮದ ರೈತ ದಂಪತಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಮೀಸೆ ಪುಟ್ಟಸ್ವಾಮಿ, ಪಾಂಡವಪುರ ತಾಲೂಕಿನ ಮಂಡಿಬೆಟ್ಟಹಳ್ಳಿಯ ಎಂ.ಎಸ್.ಮಂಜುನಾಥ್ ಸೇರಿದಂತೆ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.

ರಾಜಕೀಯ ಲಾಭಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಮನೆಗೆ ಹೋಗಿ ಮೊಸಳೆ ಕಣ್ಣೀರು ಸುರಿಸುವುದು ಪರಿಹಾರವಲ್ಲ. ರೈತ ಮತ್ತು ಕೂಲಿಕಾರನ ಬದುಕು ಉತ್ತಮವಾಗಬೇಕು. ಅವರು ಸತ್ತಂತೆ ಬದುಕುತ್ತಿದ್ದಾರೆ. ಅವರ ಜೀವನವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆತ್ಮಹತ್ಯೆ ಮಾಡಿಕೊಂಡ ನಾಲ್ವರು ರೈತರ ಕುಟುಂಬಗಳಿಗೆ ತಕ್ಷಣ ತಲಾ ೨೫ ಲಕ್ಷ ರುಪಾಯಿ ಪರಿಹಾರ ನೀಡಬೇಕು. ರಾಜ್ಯದ ಎಲ್ಲಾ ರೈತರ ಬ್ಯಾಂಕ್ ಸಾಲ, ಸಹಕಾರ ಸಂಘಗಳ ಸಾಲ, ಮೈಕ್ರೋ ಫೈನಾನ್ಸ್ ಸಾಲ ಮತ್ತು ಕೈಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಈಗಾಗಲೇ ಆತ್ಮಹತ್ಯೆ ಮಾಡಿಕೊಂಡು ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲಾ ರೈತ ಕುಟುಂಬಗಳಿಗೆ ಬಾಕಿ ಇರುವ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು.ಜೊತೆಗೆ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಂತೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಾಂತ ಕೂಲಿಕಾರರ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್. ಭರತ್‌ರಾಜ್, ಸಹಸಂಚಾಲಕರಾದ ಟಿ.ಎಸ್. ಸಿದ್ದೇಗೌಡ,ಎನ್.ಲಿಂಗರಾಜ ಮೂರ್ತಿ, ಮುಖಂಡರಾದ ಎಂ.ಇ.ಮಹದೇವ್, ಪ್ರಮೀಳಾ ಹಲಗೂರು, ಅಬ್ದುಲ್ ಶುಕೂರ್, ಮಹದೇವಮ್ಮ, ಜಯಮ್ಮ, ಕುಮಾರಸ್ವಾಮಿ, ಪ್ರಕಾಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ: ಕೆ.ಆರ್.ನಂದಿನಿ
ವಿದ್ಯಾರ್ಥಿಗಳಲ್ಲಿ ಶಿಸ್ತು ಇದ್ದರೆ ಭವಿಷ್ಯ ಉಜ್ವಲ: ಎಚ್.ಎಂ.ಆನಂದ್ ಕುಮಾರ್