ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಈ ಸಂದರ್ಭ ಶಾಲೆ-ಕಾಲೇಜು, ಅಂಗಡಿ ಮುಗ್ಗಟ್ಟು, ಸಂತೆ, ಬಸ್ ಸಾರಿಗೆ ಸೇರಿ ಎಲ್ಲವೂ ಸ್ವಯಂಪ್ರೇರಿತವಾಗಿ ಬೆಳಗ್ಗೆಯಿಂದಲೇ ಸಂಪೂರ್ಣ ಬಂದ್ ಆಗಿದ್ದವು. ಬೆಳಗ್ಗೆ 10 ಗಂಟೆಗೆ ನಗರದ ಕಾಡಸಿದ್ದೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಗೆ ಹಿರೇಮಠದ ಶರಣಬಸವ ಶಿವಾಚಾರ್ಯರು ಚಾಲನೆ ನೀಡಿದರು. ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು, ಮಠಾಧೀಶರು, ವ್ಯಾಪಾರಸ್ಥರು, ನೇಕಾರರು, ಯುವಕರು, ಮಹಿಳೆಯರು ಸೇರಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕಾಡಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಮೆರವಣಿಗೆಯುದ್ದಕ್ಕೂ ಸರ್ಕಾರದ ಮತ್ತು ಜನಪ್ರತಿನಿಧಿಗಳ ವಿರುದ್ಧ ಅಸಹನೆ ಜತೆಗೆ ಪ್ರಜಾಸೌಧ ಬನಹಟ್ಟಿಯಲ್ಲಿಯೇ ನಿರ್ಮಾಣವಾಗಬೇಕು, ಬನಹಟ್ಟಿಯಲ್ಲಿಯೇ ಪ್ರಜಾಸೌಧ ಎಂಬ ಘೋಷಣೆಗಳು ಸತತ ಭೋರ್ಗರೆದವು. ಜನರ ಒಗ್ಗಟ್ಟು ಹಾಗೂ ಹೋರಾಟದ ಉತ್ಸಾಹ ಮೆರವಣಿಗೆಯುದ್ದಕ್ಕೂ ಕಂಡುಬಂದವು.ಮೆರವಣಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಬನಹಟ್ಟಿ ಬಸ್ ನಿಲ್ದಾಣದ ಸಮೀಪದ ಚೆನ್ನಮ್ಮ ವೃತ್ತದಲ್ಲಿರುವ ಸತ್ಯಾಗ್ರಹ ಸ್ಥಳಕ್ಕೆ ತೆರಳಿತು. ಮೆರವಣಿಗೆಯಲ್ಲಿದ್ದ ಶ್ರೀಗಳಿಗೆ ಹಾಗೂ ಹೋರಾಟಗಾರರಿಗೆ ಜನತೆ ಹೂಹಾರ ಹಾಕಿ ಗೌರವಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಹಿರಿಯ ಸಹಕಾರಿ ಧುರೀಣ ಭೀಮಶಿ ಮಗದುಮ್ ಮಾತನಾಡಿ, ಸದ್ಯ ನಡೆಯುತ್ತಿರುವ ಹೋರಾಟ ಸಂಘಟಿತವಾಗಿದ್ದು, ಎಲ್ಲ 37 ಸಮಾಜಗಳ ಬೆಂಬಲದಿಂದ ನಡೆಯುತ್ತಿದ್ದು, ಮುಂಬರುವ ಯಾವುದೇ ಚುನಾವಣೆಗಳಲ್ಲಿ ಸಮೀತಿ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಇಲ್ಲವೇ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಸಮಸ್ತ ಬನಹಟ್ಟಿ ಜನತೆ ಬದ್ದವಾಗಿರಬೇಕು.
ಮಠಾಧೀಶರ ಉಪಸ್ಥಿತಿಯು ಮೆರವಣಿಗೆಗೆ ಮತ್ತಷ್ಟು ಬಲ ನೀಡಿತು. ವಿವಿಧ ಸಮುದಾಯಗಳ ಜನರು ಯಾವುದೇ ಭೇದಭಾವವಿಲ್ಲದೆ ಒಂದಾಗಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಬಾಗಲಕೋಟೆ ಹೆಚ್ಚುವರಿ ಎಸ್ಪಿ ಎನ್.ಜಗದೀಶ ನೇತೃತ್ವದಲ್ಲಿ 3 ಡಿವೈಎಸ್ಪಿ, 4 ಸಿಪಿಐ, 15 ಪಿಎಸ್ಸೈ, 180 ಪೊಲೀಸ್ ಸಿಬ್ಬಂದಿ ನಿಗಾ ವಹಿಸಿದ್ದರು.
ನಗರದಲ್ಲಿ ಈಗಾಗಲೇ ಪೊಲೀಸ್ ಠಾಣೆ, ಸಿಪಿಐ, ಕಚೇರಿ, ಕೋರ್ಟ್, ನೂಲಿನ ಗಿರಣಿ, ಡೆಂಪೋ ಡೈರಿ, ನಗರ ಯೋಜನಾ ಪ್ರಾಧಿಕಾರ, ಖಜಾನೆ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಇದ್ದು, ಪ್ರಜಾಸೌಧ ಕಟ್ಟಡ ಬನಹಟ್ಟಿಯಲ್ಲೇ ಕಾರ್ಯಾರಂಭಗೊಂಡರೆ ತಾಲೂಕಿನ ಜನರಿಗೆ ನೆರವಾಗುತ್ತದೆ. ಯಾವುದೇ ರಾಜಕೀಯ ವ್ಯಕ್ತಿಗಳು ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸುವ ಭರವಸೆ ಬಿಟ್ಟು ಖಚಿತ ಆದೇಶ ಪತ್ರದೊಡನೆ ಬಂದರೆ ಮಾತ್ರ ವೇದಿಕೆ ಹತ್ತಲು ಅವಕಾಶವಿದೆ.