ಕನ್ನಡಪ್ರಭ ವಾರ್ತೆ ಬೆಳಗಾವಿ
ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ್ದ ಲಕ್ಷ್ಮಣ ಸವದಿ ಅವರು ಬೆಳಗಾವಿಯಿಂದ ತಮ್ಮ ಸ್ವಕ್ಷೇತ್ರ ಅಥಣಿಗೆ ತೆರಳುವ ಮಾರ್ಗದಲ್ಲಿ ಹಾರೂಗೇರಿ ಪಟ್ಟಣದ ಮೂಲಕ ಸಾಗಿದರು. ಈ ವೇಳೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ನೇತೃತ್ವದಲ್ಲಿ ಸವದಿ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಮುಗಳಖೋಡ ಕ್ರಾಸ್ ಬಳಿ ಸವದಿ ಅವರಿಗೆ ಬೃಹತ್ ಹಾರ ಹಾಕಿ ಸ್ವಾಗತಿಸಲಾಯಿತು. ಅಲ್ಲಿಂದ ಹಾರೂಗೇರಿ ಪಟ್ಟಣದವರೆಗೆ ಸುಮಾರು 10 ಕಿಲೋಮೀಟರ್ ರೋಡ್ ಶೋ ನಡೆಸಲಾಯಿತು. ರಸ್ತೆಯುದ್ಧಕ್ಕೂ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ವಾಹನಗಳ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡು ಸವದಿ ಪರ ಘೋಷಣೆ ಕೂಗಿದರು. ಡಾಲ್ಬಿ ಸಂಗೀತದೊಂದಿಗೆ ನಡೆದ ಮೆರವಣಿಗೆ ರಾಜಕೀಯ ಶಕ್ತಿ ಪ್ರದರ್ಶನದ ರೂಪ ಪಡೆದುಕೊಂಡಿತು.
ಕಾಂಗ್ರೆಸ್‌ನಲ್ಲೇ ಇರುವ ಲಕ್ಷ್ಮಣ ಸವದಿ ಮತ್ತು ಸಚಿವ ಸತೀಶ್ ಜಾರಕಿಹೊಳಿ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಇದೇ ವೇಳೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಮತ್ತು ಸತೀಶ್ ಜಾರಕಿಹೊಳಿ ನಡುವೆಯೂ ರಾಜಕೀಯ ಅಂತರವಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸವದಿ ಅವರಿಗೆ ತಮ್ಮಣ್ಣವರ ನೀಡಿದ ಭರ್ಜರಿ ಸ್ವಾಗತವನ್ನು ಸಚಿವ ಸತೀಶ್ ಅವರಿಗೆ ಪರೋಕ್ಷ ಸಂದೇಶ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಸವದಿ ಮತ್ತು ತಮ್ಮಣ್ಣವರ ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿರುವುದು ಜಿಲ್ಲೆಯ ಮುಂದಿನ ರಾಜಕೀಯ ಸಮೀಕರಣಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.ಸಚಿವರಾಗಿ ಮೊದಲ ಬಾರಿಗೆ ಬೆಳಗಾವಿಯ ಸದಾಶಿವ ನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಲಕ್ಷ್ಮಣ ಸವದಿ ಅವರನ್ನು ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಅಧಿಕಾರಿಗಳು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ನೂತನ ಸಚಿವ ಲಕ್ಷ್ಮಣ ಸವದಿ ಅವರು ಅಥಣಿ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಖಡ್ಗ ಹಿಡಿದು ಪ್ರದರ್ಶಿಸಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತು. ಸಚಿವರಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಅಥಣಿಗೆ ಆಗಮಿಸಿದ ಸವದಿ ಅವರಿಗೆ ಮಾರ್ಗದುದ್ದಕ್ಕೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ಅಥಣಿ ಪಟ್ಟಣದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಸವದಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.