ಭಟ್ಕಳದಲ್ಲಿ ಚತುಷ್ಪಥ ಹೆದ್ದಾರಿ ಸಮಸ್ಯೆ, ಕಾಮಗಾರಿ ಬಗ್ಗೆ ಪ್ರಮುಖರ ಚರ್ಚೆ
ಕನ್ನಡಪ್ರಭ ವಾರ್ತೆ ಭಟ್ಕಳರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ ಬುಧವಾರ ಐಆರ್ ಬಿ ಅಭಿಯಂತರರೊಂದಿಗೆ ಪ್ರವಾಸಿ ಮಂದಿರಕ್ಕೆ ಆಗಮಿಸಿ ಹೆದ್ದಾರಿ ಸಮಸ್ಯೆಗಳ ಬಗ್ಗೆ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರು ಮತ್ತು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭ ಮಾತನಾಡಿದ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸತೀಶಕುಮಾರ ನಾಯ್ಕ, ಭಟ್ಕಳದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಬೀದಿ ದೀಪ ತೆಗೆದು ಮೂರು ವರ್ಷ ಕಳೆದಿದ್ದು, ಇನ್ನೂ ತನಕ ಹೊಸ ಬೀದಿ ದೀಪ ಅಳವಡಿಸಿಲ್ಲ. ಇದರಿಂದ ದಿನಂಪ್ರತಿ ಅಪಘಾತಕ್ಕೆ ಕಾರಣವಾಗುತ್ತಿದೆ. ಹೆದ್ದಾರಿ ಕಾಮಗಾರಿ ಆರಂಭಿಸುವ ಪೂರ್ವದಲ್ಲಿ ಗಟಾರ, ಸರ್ವಿಸ್ ರಸ್ತೆ ಕಾಮಗಾರಿ ಆರಂಭಿಸಬೇಕು. ಕಳೆದ 3 ವರ್ಷಗಳಿಂದ ಹೆದ್ದಾರಿ ಅರ್ಧಂಬರ್ಧ ಕಾಮಗಾರಿಗಳಿಂದ ಅಪಘಾತ ಹೆಚ್ಚುತ್ತಿದೆ. ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ಅಗತ್ಯ ಕಾಮಗಾರಿಗಳನ್ನು ಮುಗಿಸಿ ಮಳೆಗಾಲದೊಳಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಗಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ತಂಝೀಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಜಾಲಿ ಪಪಂ ಉಪಾಧ್ಯಕ್ಷ ಇಮ್ರಾನ್ ಲಂಕಾ, ಉದ್ಯಮಿ ಸಾದುಲ್ಲಾ ದಾಮ್ದಾ, ಮಿಸ್ಭಾ ಉಲ್ ಹಕ್ ಮುಂತಾದವರು ಹೆದ್ದಾರಿ ಕಾಮಗಾರಿ ವಿಳಂಬದಿಂದ ಆಗುತ್ತಿರುವ ತೊಂದರೆ, ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿ ಹೊಳೆ ಆಗುತ್ತಿರುವುದು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ತಿಳಿಸಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿದರು. ಉಪಸ್ಥಿತ ಪ್ರಮುಖರು ಐಆರ್ ಬಿ ಕಂಪೆನಿಯವರು ಈಗಾಗಲೇ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ಇನ್ನಾದರೂ ಹೆದ್ದಾರಿ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿಸಬೇಕು.ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಮುತುವರ್ಜಿ ವಹಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರಮುಖರ ಅಹವಾಲು ಸ್ವೀಕರಿಸಿ ಮಾತನಾಡಿದ ಯೋಜನಾ ನಿರ್ದೇಶಕ ಶಿವಕುಮಾರ, ಎಲ್ಲಾ ಸಮಸ್ಯೆಗಳ ಬಗ್ಗೆ ಅರಿವಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹೆದ್ದಾರಿ ಕಾಮಗಾರಿ ಪೂರ್ವದಲ್ಲಿ ಗಟಾರ ಕಾಮಗಾರಿಗೆ ಆದ್ಯತೆ ನೀಡಲಾಗುವುದು. ಒಂದು ವಾರದಲ್ಲಿ ಬೀದಿ ದೀಪದ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಐಆರ್ ಬಿ ಅಭಿಯಂತರ ಮಾತನಾಡಿ, ಪಟ್ಟಣದಲ್ಲಿ 1.4 ಕಿಮೀ ರಸ್ತೆ ಕೆಲಸ ಬಾಕಿ ಇದೆ. ರಂಗಿಕಟ್ಟೆ, ಕೋಟೇಶ್ವರ ನಗರದಲ್ಲಿ ಸಮಸ್ಯೆ ಇದ್ದು, ಇದು ಬಗೆಹರಿದರೆ ಕಾಮಗಾರಿಗೆ ಯಾವುದೇ ರೀತಿಯ ತೊಂದರೆ ಆಗದು ಎಂದರು. ಸಭೆಯ ನಂತರ ಅಧಿಕಾರಿಗಳು ಪ್ರಮುಖರೊಂದಿಗೆ ರಂಗಿನಕಟ್ಟೆ, ಕೋಟೇಶ್ವರ ನಗರ, ಮಣ್ಕುಳಿ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭ ಪುರಸಭೆ ಪ್ರಭಾರೆ ಅಧ್ಯಕ್ಷ ಅಲ್ತಾಪ್ ಖರೂರಿ, ಮುಖ್ಯಾಧಿಕಾರಿ ವೆಂಕಟೇಶ ನಾವುಡ, ನಾಗರಿಕ ಹಿತರಕ್ಷಣಾ ವೇದಿಕೆಯ ನಾಗರಾಜ ನಾಯಕ, ಸುಭೋಧ ಆಚಾರ್ಯ, ಅಝೀಜುರರೆಹಮಾನ್, ಎಸ್.ಎಂ. ಪರ್ವೇಜ್ ಮುಂತಾದವರಿದ್ದರು.