ಕಂಪ್ಲಿ: ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಂಪ್ಲಿ- ಗಂಗಾವತಿ ಸಂಪರ್ಕ ಸೇತುವೆಯ ಗುಣಮಟ್ಟ ಪರಿಶೀಲಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿದರು.
ಕಲಬುರಗಿ ವಲಯದ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಶರಣಪ್ಪ ಸೂಲಗುಂಟಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಬಲಿಷ್ಠತೆ, ನಿರ್ಮಾಣದ ಗುಣಮಟ್ಟ ಮತ್ತು ಸಂಚಾರದ ಸುರಕ್ಷತೆ ಕುರಿತು ಪರಿಶೀಲಿಸಿದರು.ಮುಖ್ಯ ಅಭಿಯಂತರ ಶರಣಪ್ಪ ಸೂಲಗುಂಟಿ ಸೇತುವೆಯ ಪ್ರಸ್ತುತ ಸ್ಥಿತಿ ಹಾಗೂ ನಿರ್ಮಾಣದ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಇದರ ಕುರಿತು ಸಂಪೂರ್ಣ ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಇನ್ನು ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ನೂತನ ಪ್ರವಾಸಿ ಮಂದಿರಕ್ಕೆ ಅಗತ್ಯ ಪೀಠೋಪಕರಣ ಮತ್ತು ಸೌಲಭ್ಯಗಳನ್ನು ಒದಗಿಸುವ ಕಾರ್ಯ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಬಳ್ಳಾರಿಯ ಲೋಕೋಪಯೋಗಿ ಇಲಾಖೆಯ ಉಪ ಅಭಿಯಂತರ ಜಿ. ಬಸವರೆಡ್ಡಿ ಮಾತನಾಡಿ, ಕಂಪ್ಲಿ- ಗಂಗಾವತಿ ನಡುವಿನ ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಾಣ ಅಗತ್ಯತೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಪಿಡಬ್ಲ್ಯೂಡಿ ಅಧಿಕಾರಿಗಳ ಸಂಯುಕ್ತ ತಂಡವು ಸೇತುವೆ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಗುರುತಿಸುವ ಕಾರ್ಯ ಕೈಗೊಂಡಿದೆ. ಕಂಪ್ಲಿ ಶಾಸಕರ ತುರ್ತು ಒತ್ತಾಯದ ಮೇರೆಗೆ ಚಿಕ್ಕಜಂತಕಲ್ ಹಾಗೂ ಕೋಟೆ ಭಾಗಗಳಲ್ಲಿ ಸ್ಥಳ ವೀಕ್ಷಣೆ ನಡೆಸಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಳ್ಳಾರಿಯ ಅಧೀಕ್ಷಕ ಅಭಿಯಂತರ ತಿಮ್ಮರಾಯಪ್ಪ, ಬಳ್ಳಾರಿ ಲೋಕೋಪಯೋಗಿ ಇಲಾಖೆಯ ಇಇ ಹೇಮರಾಜು, ಎಇಇ ಹೇಮಂತರಾಜ ಕೊಪ್ಪಳ, ಎಇಇ ರಾಘವೇಂದ್ರ, ಎಇಇ ವಿಶ್ವನಾಥ ಗಂಗಾವತಿ, ಸೆಕ್ಷನ್ ಆಫೀಸರ್‌ಗಳಾದ ಆನಂದ್, ತಸ್ಲೀಮ್ ಇದ್ದರು.